Breaking Newsಶಾಸಕ ವಾರ್ತೆ

ಶ್ರೀ ಸಾಮಾನ್ಯನ ಕುರಿತು ಕಾಳಜಿಯಿಲ್ಲದ ಸರಕಾರ ಜನರನ್ನು ಲೂಟಿ ಮಾಡುವುದರಲ್ಲೇ ನಿರತವಾಗಿದೆ – ವೇದವ್ಯಾಸ್ ಕಾಮತ್

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾದ ದಿನದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಜನ ಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಬೆಲೆಯೇರಿಕೆಯಿಂದ ಹೈರಾಣಾಗಿರುವ‌ ಶ್ರೀ ಸಾಮಾನ್ಯನ ಕುರಿತು ಕಾಳಜಿಯಿಲ್ಲದ ಸರಕಾರ ಜನರನ್ನು ಲೂಟಿ ಮಾಡುವುದರಲ್ಲೇ ನಿರತವಾಗಿದೆ ಎಂದು ಕಾಮತ್ ಕಿಡಿಕಾರಿದ್ದಾರೆ.

ಗೃಹಜ್ಯೋತಿ ಗ್ಯಾರೆಂಟಿ ಘೋಷಿಸಿದ್ದ ರಾಜ್ಯ ಸರಕಾರ ಜನತೆಗೆ ವಿದ್ಯುತ್ ದರ ಏರಿಕೆಯ ಬರೆ ಹಾಕಿದೆ. ವಿದ್ಯುತ್ ದರದಲ್ಲಿ ಗರಿಷ್ಟ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದ್ದು, ಸರಕಾರ ಜನರಿಗೆ ಮಂಕುಬೂದಿ ಎರಚಿದೆ. 175 ರೂಪಾಯಿಯ ಅಕ್ಕಿ ಉಚಿತ ನೀಡುವುದಾಗಿ ಬೆನ್ನು ತಟ್ಟಿಕೊಳ್ಳುವ ಸರಕಾರ ಹಾಲಿನ ದರ 3 ರೂಪಾಯಿ ಹೆಚ್ಚಿಸಿ ಪ್ರತಿ ಮನೆಯಿಂದ ತಿಂಗಳಿಗೆ ಕನಿಷ್ಠ 1 ಸಾವಿರಕ್ಕೂ ಅಧಿಕ ರೂಪಾಯಿ ಕೊಳ್ಳೆಹೊಡೆಯುತ್ತಿದೆ. ಮೂರು ತಿಂಗಳ ಹಿಂದೆ ಕೆ.ಜಿಗೆ 38-40 ರೂಪಾಯಿಗಳಷ್ಟಿದ್ದ ಅಕ್ಕಿ ಬೆಲೆ ಇಂದು 50 ರೂಪಾಯಿ ಅಸುಪಾಸಿನಲ್ಲಿದೆ ಎಂದು ಹೇಳಿದ್ದಾರೆ.

ತರಕಾರಿಗಳ ಬೆಲೆಯೇರಿಕೆಯಿಂದ ರಾಜ್ಯದ ಜನರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಸಿ ಸಾಮಾಗ್ರಿಗಳ ಬೆಲೆಯೇರಿಕೆಯಿಂದ ಜನ ಸಾಮಾನ್ಯನ ಮೇಲೆ ಮಾತ್ರವಲ್ಲ ಹೋಟೆಲ್ ಉದ್ಯಮದ ಮೇಲೂ ಪ್ರಭಾವ ಬೀರಿದೆ. ಕಳೆದ ಕೆಲವು ದಿನಗಳಿಂದ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಹೋಟೆಲು ತಿನಸುಗಳ ಬೆಲೆಯಲ್ಲೂ ಏರಿಕೆಯಾಗಿದೆ. ಅಂದು ಬೆಲೆಯೇರಿಕೆಯಾಗಿದೆ ಎಂದು ಬೀದಿಗಿಳಿದು ಹೋರಾಟ ಮಾಡಿದ್ದ ಕಾಂಗ್ರೇಸ್ ನಾಯಕರೆಲ್ಲರೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದರು.

ಶಾಲಾ, ಕಾಲೇಜುಗಳ ವಾಹನಗಳು, ಅತೀ ಭಾರದ ಸರಕು ಸಾಗಣೆ ವಾಹನಗಳು, ಮೋಟಾರು ಕ್ಯಾಬ್ ಗಳ ತೆರಿಗೆ ಹೆಚ್ಚಳ ಮಾಡಲಾಗಿದೆ. ಶಾಲಾ ವಿಧ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಸಂಚಾರಕ್ಕೆ ಬಳಸುವ ವಾಹನಗಳ ಪ್ರತಿ ಚದರ ಮೀಟರ್ ತೆರಿಗೆಯನ್ನು 20 ರೂಪಾಯಿಯಿಂದ 100 ರೂಪಾಯಿಗೆ ಏರಿಕೆ ಮಾಡಲಾಗಿದ್ದು ರಾಜ್ಯ ಸರಕಾರವು ಜನರಿಂದ ಲೂಟಿ ಮಾಡುತ್ತಿದೆ.

ಅಬಕಾರಿ ಶುಲ್ಕ ಹೆಚ್ಚಳದಿಂದ ಸರಕಾರ ಬೊಕ್ಕಸ ತುಂಬಿಸಲು ಪ್ರಯತ್ನಿಸುತ್ತಿದೆ. ಸ್ಟಾಂಪ್ ಡ್ಯೂಟಿ ತೆರಿಗೆ ಹೆಚ್ಚಳದಿಂದ ನಗರದಲ್ಲಿ ಔದ್ಯಮಿಕ ಬೆಳವಣಿಗೆಗೆ ಸಮಸ್ಯೆ ಉಂಟಾಗುತ್ತಿದೆ. ನಿರಂತರವಾಗಿ ಜನರನ್ನು ಲೂಟಿ ಮಾಡುವ ಮೂಲಕ ರಾಜ್ಯ ಸರಕಾರವು ಶ್ರೀ ಸಾಮಾನ್ಯನ್ನು ಬೀದಿಗೆ ತಂದು ನಿಲ್ಲಿಸಿದೆ.

ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ಅವರೇ ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಹೊಂದಿಸುವುದು ಕಷ್ಟ ಎಂಬರ್ಥದಲ್ಲಿ ನೀಡಿರುವ ಹೇಳಿಕೆಯು ಇದಕ್ಕೆ ಪೂರಕವಾಗಿದ್ದು ಜನಸಾಮಾನ್ಯರ ಬೇಡಿಕೆಗಳನ್ನು ರಾಜ್ಯ ಸರಕಾರ ಸಂಪೂರ್ಣ ಕಡೆಗಣಿಸಿ ಆಡಳಿತ ನಡೆಸುತ್ತಿದೆ. ಈ ಕಾರಣಗಳಿಂದಾಗಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಗ್ಯಾರಂಟಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಿಚಾರಗಳಿಗೆ ಸರಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಶಾಸಕ ಕಾಮತ್ ಕಿಡಿ ಕಾರಿದ್ದಾರೆ.

Leave a Reply

Your email address will not be published. Required fields are marked *

Back to top button