Breaking Newsಶಾಸಕ ವಾರ್ತೆ

ಕಾಂಗ್ರೆಸ್ ಸರಕಾರದಿಂದ ಕತ್ತಲೆ ಗ್ಯಾರಂಟಿ: ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ರಾಜ್ಯದಲ್ಲಿ ಉಚಿತ ಗ್ಯಾರಂಟಿಗಳ ಮೂಲಕ ಜನರನ್ನು ಮರಳು ಮಾಡುತ್ತಿರುವ ಕಾಂಗ್ರೆಸ್ ಸರಕಾರ ಇದೀಗ ಉಚಿತ ವಿದ್ಯುತ್ ನೀಡಿ, ಇನ್ನೊಂದು ಕಡೆಯಿಂದ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ಜನರನ್ನು ವಂಚಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.

ಕಳೆದೊಂದು ವಾರದಿಂದ ರಾತ್ರಿ ಪೀಕ್ ಅವರ್ ನಲ್ಲಿ ವಿದ್ಯುತ್ ಕಡಿತ ಮಾಡುತ್ತಿದ್ದು, ಗ್ರಾಹಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳಿಗೆ ರಾತ್ರಿ ಓದು, ಬರಹಕ್ಕೆ ಸಮಸ್ಯೆಯಾದರೆ, ಗೃಹಿಣಿಯರಿಗೆ ರಾತ್ರಿ ಅಡುಗೆ ಮಾಡಲು ಆಗುತ್ತಿಲ್ಲ. ಇನ್ನು ವಿದ್ಯುತ್‍ ನ್ನು ನಂಬಿ ಸಣ್ಣಪುಟ್ಟ ಉದ್ದಿಮೆ ನಡೆಸುವವರ ಬದುಕಿಗೆ ಸರಕಾರ ಕೊಳ್ಳಿ ಇಡಲು ಹೊರಟಿದೆ. ನಾವು ಉಚಿತ ವಿದ್ಯುತ್ ನೀಡಿದ್ದೇವೆ ಎಂದು ಒಂದೆಡೆಯಿಂದ ಸರಕಾರ ಬೀಗುತ್ತಿದ್ದರೆ, ಇನ್ನೊಂದೆಡೆಯಿಂದ ವಿದ್ಯುತ್ ಕಡಿತ ಮಾಡುವ ಮೂಲಕ ಗ್ರಾಹಕರನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಅವರು ದೂರಿದ್ದಾರೆ.

ಉಚಿತ ಗ್ಯಾರಂಟಿ ನೀಡುವ ಸಲುವಾಗಿ ಸರಕಾರಕ್ಕೆ ದೊಡ್ಡ ಹೊರೆಯಾಗುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರಕಾರವೇ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಮಾಡಲು ಎಸ್ಕಾಂಗಳಿಗೆ ಸೂಚನೆ ನೀಡಿದೆ ಎಂಬ ಮಾಹಿತಿ ಇದೆ. ಉಚಿತಗಳನ್ನು ನೀಡುವ ಸಲುವಾಗಿ ಬೆಲೆ ಹೆಚ್ಚಳ ಮಾಡಿರುವ ಸರಕಾರ ಇದೀಗ ಹಿಂಬಾಗಿಲ ಮೂಲಕ ವೆಚ್ಚ ಕಡಿತಕ್ಕೆ ಇಳಿದಿದ್ದು, ಈ ಮೂಲಕ ಇಡೀ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿ ಜನಸಾಮಾನ್ಯರಿಗೆ ಮೋಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸಾಮಾನ್ಯವಾಗಿ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾದಾಗ ಅಥವಾ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾದಾಗ ತಾತ್ಕಾಲಿಕವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇನ್ನು ಬೇಸಿಗೆ ಅವಧಿಯಲ್ಲಿ ವಿದ್ಯುತ್ ಬಳಕೆ ಹೆಚ್ಚಾದಾಗ ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಸರಿದೂಗಿಸುವ ಸಲುವಾಗಿ ಹಂತ ಹಂತವಾಗಿ ಲೋಡ್ ಶೆಡ್ಡಿಂಗ್ ಮಾಡುವುದು ಸಾಮಾನ್ಯ. ಆದರೆ ಮಳೆಗಾಲದಲ್ಲೇ ಅನಧಿಕೃತ ಲೋಡ್ ಶೆಡ್ಡಿಂಗ್ ಮಾಡಲು ರಾಜ್ಯ ಸರಕಾರ ಸೂಚನೆ ನೀಡುವ ಮೂಲಕ ಜನರ ಬದುಕನ್ನು ಕಸಿಯಲು ಹೊರಟಂತಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button