Breaking NewsOthersಜನ-ಪ್ರತಿನಿಧಿಮುಖ್ಯಮಂತ್ರಿ ನ್ಯೂಸ್ಸುದ್ದಿ ಸಮಾಚಾರ

ವಾಲ್ಮೀಕಿ ಸಮಾಜದ ಸಾಮಾಜಿಕ ನ್ಯಾಯದ ಒತ್ತಾಯ,ಬೇಡಿಕೆಗಳಿಗೆ ಸಿ ಎಮ್ ಅಭಯ

ನಕಲಿ ST ಜಾತಿ ಪ್ರಮಾಣ ನೀಡುವವರ, ಕೇಳುವವರ ಮತ್ತು ಮಾನ್ಯ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ವಾಲ್ಮೀಕಿ ಸಮಾಜದ ನಿಯೋಗ ಒತ್ತಾಯ

ಮೀಸಲಾತಿ ಕುರಿತ ಗೊಂದಲ ನಿವಾರಣೆಗೆ ಪ್ರತ್ಯೇಕ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಸದನದಲ್ಲಿ ಧ್ವನಿ ಎತ್ತಿದ್ದೆ. ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ: ವಾಲ್ಮೀಕಿ ಸಮುದಾಯಕ್ಕೆ ಸಿಎಂ ಅಭಯ

ಬೆಂಗಳೂರು, ಜುಲೈ 05 : ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಗೊಂದಲಗಳ ನಿವಾರಣೆಗೆ ಬಜೆಟ್ ಅಧಿವೇಶನ ಮುಗಿದ ನಂತರ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಹಾಗೂ ಸಮುದಾಯದ ಸಚಿವರೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸುತ್ತೇನೆ. ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು ವಾಲ್ಮೀಕಿ ಸಮಾಜದ ಹಿತ ಕಾಪಾಡಲು ಬದ್ದವಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸಚಿವರು ಹಾಗೂ ಶಾಸಕರ ನಿಯೋಗ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಹಿಂದಿನ ಸರ್ಕಾರ ಮೀಸಲಾತಿ ಕುರಿತು ಆತುರಾತುರವಾಗಿ ತೀರ್ಮಾನ ಮಾಡಿದ್ದು, ಗೊಂದಲ ಸೃಷ್ಟಿಸಿದೆ. ಮುಸ್ಲಿಮರಿಗೆ ಶೇ 4 ರಷ್ಟಿದ್ದ ಮೀಸಲಾತಿ ರದ್ದು ಮಾಡಿ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ತಲಾ ಶೇ 2 ರಷ್ಟು ಮೀಸಲಾತಿ ನೀಡಿದೆ. 2 ಸಿ, 2 ಡಿ ಸಹ ಮಾಡಿದ್ದಾರೆ. ಇದರ ಬಗ್ಗೆ ಗೊಂದಲಗಳಿವೆ. ಸಂವಿಧಾನಾತ್ಮಕ ವಾಗಿ ಇಲ್ಲದಿರುವ ಕಾರಣ ಸುದೀರ್ಘ ಚರ್ಚೆಯ ಅಗತ್ಯವಿದೆ. ಒಟ್ಟಾರೆ ಮೀಸಲಾತಿಯ ಪರಿಮಿತಿಯನ್ನು ಸಡಿಲಗೊಳಿಸದಿದ್ದರೆ ಪರಿಹಾರ ಸಿಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ
ಪರಿಶಿಷ್ಟ ಜಾತಿ ಹಾಗೂ ಪಂಗಡದ ಪ್ರಮಾಣಪತ್ರ ವಿತರಣೆಯಾಗುತ್ತಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಸಿ.ಆರ್.ಇ ಸೆಲ್ ನಲ್ಲಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ರಾಯಚೂರು, ಬಿಜಾಪುರ, ಭಾಗದಲ್ಲಿ ಕೋಲಿ, ಕಬ್ಬಲಿಗ, ತಳವಾರರ ಸಮುದಾಯಗಳನ್ನು ಎಸ್.ಟಿ ಗೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಕೋಲಿ ಸಮಾಜದವರು ತಳವಾರರು ಎಂದೇ ಹೇಳುತ್ತಾರೆ. ಈ ಗೊಂದಲಗಳ ಬಗ್ಗೆಯೂ ತೀರ್ಮಾನವಾಗಬೇಕು. ನಾಯಕ ಸಮುದಾಯದ ತಳವಾಲರರನ್ನು ಮಾತ್ರ ಎಸ್.ಟಿ ಗೆ ಸೇರಿಸಲಾಗಿದ್ದು ಇವೆಲ್ಲಾ ಅತ್ಯಂತ ಸೂಕ್ಷ್ಮ ವಿಚಾರವಾಗಿರುವುದರಿಂದ ಸಂವಿಧಾನ ಮತ್ತು ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗುವುದು ಎಂದು ಭರವಸೆಯಿತ್ತರು.

ಪರಿಶಿಷ್ಟ ಪಂಗಡಕ್ಕೆ ಸ್ಥಾಪನೆಯಾಗಿರುವ ಪ್ರತ್ಯೇಕ ಸಚಿವಾಲಯಕ್ಕೆ ಕಾರ್ಯದರ್ಶಿ ನೇಮಕಾತಿ ಮಾಡಲಾಗುವುದು. ಬುಡಕಟ್ಟು ಸಲಹಾ ಮಂಡಳಿ ಸ್ಥಾಪನೆ ಬಗ್ಗೆ ವರದಿ ನೀಡಿದಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮೀಸಲಾತಿಯನ್ನು ಸಂವಿಧಾನದ 9 ನೇ ಪರಿಚ್ಛೇಧಕ್ಕೆ ಸೇರಿಸಲು ನಮ್ಮ ಸರ್ಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಅದಕ್ಕೆ ಮೊದಲು ಬಿಜೆಪಿ ಸರ್ಕಾರ ಸೃಷ್ಟಿಸಿದ ಎಲ್ಲಾ ಗೊಂದಲಗಳನ್ನು ನಿವಾರಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.

ಸಹಕಾರ ಸಚಿವ ರಾಜಣ್ಣ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಾಲ್ಮೀಕಿ ಸಮುದಾಯದ 14 ಶಾಸಕರು, ಮುಖಂಡರು ಹಾಗೂ ಜನಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button