Breaking Newsಕರ್ನಾಟಕ ರಾಜಕೀಯ

ಸಚಿವ ಶಿವರಾಜ ತಂಗಡಗಿ ರಾಜೀನಾಮೆಗೆ ಎಎಪಿ ಆಗ್ರಹ: ಸಿ.ಎಂಗೆ ಪತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ನಿಲಯ ಪಾಲಕರ ಬಡ್ತಿ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಹಾರ ಕುರಿತು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಸಚಿವ ಶಿವರಾಜ ತಂಗಡಗಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಟ್ರಾನ್ಸ್‌ಫರ್‌, ಕಮೀಷನ್ ದಂಧೆಗೆ ಸಂಬಂಧಿಸಿದ ಸಾಕ್ಷ್ಯಾಧಾರ ಕಲೆ ಹಾಕಿ ಶಿವರಾಜ ತಂಗಡಗಿ ವಿರುದ್ಧ ಲೋಕಾಯುಕ್ತರಲ್ಲಿ ದೂರು ದಾಖಲಿಸಬೇಕು. ಈ ವಿಚಾರವಾಗಿ ಸಿಎಂ ಖುದ್ದಾಗಿ ಮುತವರ್ಜಿ ವಹಿಸಿ ಉನ್ನತ ಮಟ್ಟದಲ್ಲಿರುವ ಮಂತ್ರಿಗಳು ಹಾಗು ಅಧಿಕಾರಿಗಳು ತನಿಖೆಯ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ಪಂಜಾಬ್ ಸರ್ಕಾರದಲ್ಲಿ ಒಬ್ಬ ಮಂತ್ರಿ 1% ಕಮೀಷನ್ ಕೇಳಿದರು ಎಂಬ ಸುಳಿವು ಸಿಕ್ಕ ತಕ್ಷಣ ಪಂಜಾಬ್ ಮುಖ್ಯಮಂತ್ರಿ ಆ ಮಂತ್ರಿಯನ್ನು ವಜಾ ಮಾಡಿ ಜೈಲಿಗೆ ಕಳುಹಿಸಿದರು. ಇಂತಹ ಕ್ರಮ ನೀವು ಕರ್ನಾಟಕದಲ್ಲಿ ಜರುಗಿಸದೇ ಇದ್ದಲ್ಲಿ ಈ ಅಕ್ರಮದಲ್ಲಿ ನೀವೂ ಶಾಮೀಲಿದ್ದಿರಿ ಎಂದೆನಿಸುವುದು ಸಹಜ. ಈ ಕ್ರಮಗಳನ್ನು ತಾವು ತೆಗೆದುಕೊಳ್ಳದೇ ಹೋದರೆ ಕಮಿಷನ್ ಸರಕಾರ ಹೋಗಿಸಿ ಕಲೆಕ್ಷನ್ ಸರಕಾರ ತಂದಿರುವ ನಿಮ್ಮ ವಿರುದ್ದ ಆಮ್ ಆದ್ಮಿ ಪಾರ್ಟಿ ಹೋರಾಟಕ್ಕೆ ಇಳಿಯಲಿದೆ ಎಂದು ಪತ್ರದಲ್ಲಿ ಡಾ. ಮುಖ್ಯಮಂತ್ರಿ ಚಂದ್ರು ಎಚ್ಚರಿಸಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ನಿಯಮವನ್ನು ಉಲ್ಲಂಘಿಸಿ ಮುಖ್ಯಮಂತ್ರಿಗಳ ಹಾಗು ಸಂಪುಟದ ಗಮನಕ್ಕೂ ತರದೇ ಇಲಾಖೆಯಿಂದ ಅನಧಿಕೃತವಾಗಿ ನಿಲಯ ಪಾಲಕರ ಹುದ್ದೆಗೆ 312 ಅಧಿಕಾರಿಗಳನ್ನು ಕಾನೂನು ಬಾಹಿರವಾಗಿ ಮುಂಬಡ್ತಿ ಮಾಡಿ ಆದೇಶ ಹೊರಡಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಈ ಕಾನೂನು ಬಾಹಿರವಾಗಿ ತೆಗೆದುಕೊಂಡ ಕ್ರಮಕ್ಕೆ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರ ಸಮ್ಮತಿ ಇದೆ ಎಂದು ಶಿವರಾಜ ತಂಗಡಗಿ ಹೇಳಿದ್ದಾರೆ. ಕಾನೂನು ಬಾಹಿರವಾದ ಈ ಅವ್ಯವಹಾರಕ್ಕೆ ಕಾನೂನು ಸಚಿವರು ಒಪ್ಪಿಗೆ ಸೂಚಿಸಿರುವುದು ಯಾವ ಒತ್ತಡದಿಂದ ಎಂಬ ಅನುಮಾನ ಹುಟ್ಟಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವೇತನ ಶ್ರೇಣಿಯಲ್ಲಿ ಬದಲಾವಣೆ ಇಲ್ಲ ಎಂದು ಹಣಕಾಸಿನ ವಿಚಾರವಾಗಿ ಸಬೂಬು ಕೊಡುತ್ತಿರುವ ಸಚಿವರು ಹಾಗಾದರೆ ಈ ಮುಂಬಡ್ತಿ ಯಾವ ಪುರಷಾರ್ಥಕ್ಕೆ, ಇದರಿಂದ ಲಾಭ ಯಾರಿಗೆ ಹಾಗು ಅದರಲ್ಲಿ ಸಚಿವರ ಪಾಲೆಷ್ಟು ಎಂಬ ಪ್ರಶ್ನೆಗೆ ಉತ್ತರ ಕೊಡುತ್ತಿಲ್ಲ. ಇಷ್ಟೆಲ್ಲಾ ಭ್ರಷ್ಟಾಚಾರ ನಡೆಯುತ್ತಿರುವಾಗ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಆಶ್ಚರ್ಯಕರ. ಜನರು ತಾವೂ ಇದರಲ್ಲಿ ಶಾಮೀಲಿದ್ದಿರಿ ಎಂದು ಭಾವಿಸುವ ಮುಂಚೆ ಕೆಲವು ಕಠಿಣ ಕ್ರಮ ತಾವು ತೆಗೆದುಕೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Back to top button