ಸುದ್ದಿ ಸಮಾಚಾರ

ಹೀಗೂ ವಾಟ್ಸ್‌ಆ್ಯಪ್‌ ಗ್ರೂಪ್ ಬಳಸಬಹುದು!

ಜೀವರಕ್ಷಕ ವಾಟ್ಸ್ಆ್ಯಪ್ ಗ್ರೂಪ್

ಜನರಿಗೆ ಒಳ್ಳೆಯ ಕೆಲಸ ಮಾಡಲು ಅಧಿಕಾರ, ಪ್ರಭಾವ ಬೇಕು ಎಂದು ಸಾಕಷ್ಟು ಜನ ಭ್ರಮೆಯಲ್ಲಿರುತ್ತಾರೆ. ಅದೇ ಕಾರಣಕ್ಕೆ ಕೆಲವರು ರಾಜಕೀಯಕ್ಕೆ ಬಂದು ಜನರನ್ನು ಲೂಟಿ ಮಾಡಲು ಆರಂಭಿಸುತ್ತಾರೆ. ಹಾಗೆಯೇ ಇಂದಿನ ಸಾಮಾಜಿಕ ಜಾಲತಾಣ ಅಥವಾ ವಾಟ್ಸ್‌ಆ್ಯಪ್‌ ಯುಗವೇ ಸರಿಯಿಲ್ಲ. ಯುವಜನರು ಇಡೀ ದಿನ ಮೊಬೈಲ್‌ ಹಿಡಿದುಕೊಂಡು ಕಾಲ ಹರಣ ಮಾಡುತ್ತಾರೆ. ಫೇಕ್‌ ನ್ಯೂಸ್‌ ಹರಡಿಸುವ ತಾಣವೆಂದು ಟೀಕಿಸುವವರು ಇದ್ದಾರೆ. ಆದರೆ ಇಂತಹ ವಾಟ್ಸ್‌ಆ್ಯಪ್‌ ಮೂಲಕವೂ ನೂರಾರು ಜನರನ್ನು ಬದುಕಿಸಬಹುದು ಎನ್ನುವುದನ್ನು ಹೆದ್ದಾರಿ ಕುರಿತ ಬರಹದಿಂದ ನನಗೆ ಇತ್ತೀಚೆಗೆ ಪರಿಚಯವಾದ ಸ್ನೇಹಿತರೊಬ್ಬರು ತೋರಿಸಿಕೊಟ್ಟಿದ್ದಾರೆ. 

ಹೊಸಪೇಟೆ-ವಿಜಯಪುರ ಹೆದ್ದಾರಿಯ ಅವ್ಯವಸ್ಥೆ ಬಗ್ಗೆ ನಾನು ಬರೆದಾಗ ದಯಾನಂದ್ ಸಜ್ಜನ್‌ ಅವರು ನನ್ನನ್ನು ಸಂಪರ್ಕಿಸಿದ್ದರು. ಅಲ್ಲಿಯ ರಸ್ತೆಗಳ ಭೀಕರತೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾಗಲೇ, ತಾವು ಮಾಡುತ್ತಿರುವ ಒಂದು ಪುಣ್ಯದ ಕೆಲಸದ ಬಗ್ಗೆ ಹಂಚಿಕೊಂಡರು. ಈ ವಿಷಯವನ್ನು ಕೇಳಿದಾಗ ನನಗೆ ಖುಷಿಯ ಜತೆಗೆ, ಏನೋ ಒಂದು ಸಮಾಧಾನ ಕೂಡ ಆಯಿತು. ರಾಷ್ಟ್ರೀಯ ಹೆದ್ದಾರಿ 50 (ಚಿತ್ರದುರ್ಗ-ಹೊಸಪೇಟೆ) ಕುಡ್ಲಗಿ ಬಳಿಯಲ್ಲಿನ ಸ್ನೇಹಿತರು ಸೇರಿಕೊಂಡು ಮಾಡಿರುವ ಅಪರೂಪದ ಕಾರ್ಯದ ಬಗ್ಗೆ ಸುಂದರವಾದ ಮಾಹಿತಿ ನೀಡಿದ್ದಾರೆ. ಅದನ್ನು ನೀವೂ ಓದಿ ಹಾಗೂ ಸಾಧ್ಯವಾದಲ್ಲಿ ಅನುಷ್ಠಾನ ಮಾಡುವ ಪ್ರಯತ್ನ ಮಾಡೋಣ. 

ಸುಮಾರು ನಾಲ್ಕು ವರ್ಷಗಳ ಹಿಂದೆ ಚಿತ್ರದುರ್ಗ-ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಸಂಪೂರ್ಣ ಮುಗಿಯಿತು. ಹಲವೆಡೆ ಹೆದ್ದಾರಿಯಲ್ಲಿನ ಅವೈಜ್ಞಾನಿಕ ಹಂಪ್ಸ್‌ಗಳು ಹಾಗೂ ಇತರ ಕಾರಣದಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಿತು. ಆ ಸಂದರ್ಭದಲ್ಲಿ ದಯಾನಂದ್ ಹಾಗೂ ಸ್ನೇಹಿತರು ಒಂದು ವಾಟ್ಸ್‌ಆ್ಯಪ್‌ ಗ್ರೂಪ್ ಮಾಡಿದರು.

ಆ ಗ್ರೂಪ್‌ಗೆ ಸ್ನೇಹಿತರು, ಸ್ಥಳೀಯ ಪೊಲೀಸ್‌ ಅಧಿಕಾರಿಗಳು, ಆಂಬುಲೆನ್ಸ್‌ ಚಾಲಕರು/ನಿರ್ವಾಹಕರು, ಸ್ಥಳೀಯ ಸರ್ಕಾರಿ ವೈದ್ಯರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸೇರಿಸಿದರು. ಹಾಗೆಯೇ ದಿನ ಕಳೆದಂತೆ ಆ ಮಾರ್ಗದಲ್ಲಿನ ಕೆಲವು ಹೋಟೆಲ್‌-ಅಂಗಡಿಗಳ ಮಾಲೀಕರು, ರಸ್ತೆಯಲ್ಲಿ ಕಾಯಂ ಆಗಿ ಓಡಾಡುವರನ್ನು ಗ್ರೂಪ್‌ಗೆ ಕ್ರಮೇಣ ಸೇರಿಸಲಾಯಿತು. ಎಲ್ಲರ ಸಂಘಟಿತ ಪ್ರಯತ್ನದಿಂದಾಗಿ ಒಂದಿಷ್ಟು ಒಳ್ಳೆಯ ಮನಸ್ಸುಗಳು ಒಟ್ಟಾದವು. ಬಳಿಕ ಈ ರಸ್ತೆಯಲ್ಲಿ ಯಾವುದೇ ಅಪಘಾತವಾದಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅಪ್ಡೇಟ್‌ ಬರಲು ಶುರುವಾಯಿತು.

ಅಪಘಾತವಾದಾಗ ಗಾಯಾಳುಗಳ ಸಹಕಾರಕ್ಕೆ ಆಂಬುಲೆನ್ಸ್‌ ಹಾಗೂ ಪೊಲೀಸರ ನೆರವು ಕೋರಿ ಗ್ರೂಪ್‌ನಲ್ಲಿ ಸಂದೇಶಗಳು ಬರಲು ಆರಂಭಿಸಿದವು. ಇದಕ್ಕೆ ಪೂರಕವಾಗಿ ಪೊಲೀಸರು ಹಾಗೂ ಆಂಬುಲೆನ್ಸ್‌ ನಿರ್ವಾಹಕರು ತುರ್ತಾಗಿ ನೆರವಿಗೆ ಬರಲು ಆರಂಭಿಸಿದರು. ಈ ಗ್ರೂಪ್‌ನಲ್ಲಿ ಇಂದು ನಾನೂ ಸದಸ್ಯನಾಗಿದ್ದೇನೆ. ವಿಶೇಷವೆಂದರೆ ಅದರಲ್ಲಿ ಯಾರೊಬ್ಬರೂ ಒಂದು ಅಸಂಬಂದ್ಧ ಅಥವಾ ಫಾರ್ವರ್ಡ್‌ ಸಂದೇಶ ಕಳುಹಿಸುವುದಿಲ್ಲ. ಜನರು ಹಾಗೂ ವ್ಯವಸ್ಥೆ ಕೆಟ್ಟು ಹೋಗಿದೆ ಎನ್ನುವುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಇಂತಹ ಉತ್ತಮ ಅವಕಾಶವನ್ನು ಸೃಷ್ಟಿಸಿದಾಗ ನಮ್ಮೊಳಗೆ ಅದೆಷ್ಟೋ ಒಳ್ಳೆಯ ಮನಸ್ಸುಗಳು ಇರುವುದು ಗೊತ್ತಾಗುತ್ತದೆ. 

ಈ ಗ್ರೂಪ್‌ನಲ್ಲಿರುವರಿಗೆ ಯಾರಿಗೆ ಅಪಘಾತದ ವಿವರ ಗೊತ್ತಾದರೂ ಕೂಡಲೇ ವಿಳಾಸದ ಜತೆಗೆ ಮಾಹಿತಿ ನೀಡುತ್ತಿದ್ದಾರೆ. ಹತ್ತಿರದಲ್ಲಿರುವ ಆಂಬುಲೆನ್ಸ್‌ ನಿರ್ವಾಹಕರು ಅಪಘಾತವಾದ ಸ್ಥಳಕ್ಕೆ ಬರಲು ಇದು ನೆರವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಕಾಯಕದಿಂದ 250ಕ್ಕೂ ಅಧಿಕ ಜನರ ಪ್ರಾಣವನ್ನು ಇದೊಂದು ವಾಟ್ಸ್‌ಆ್ಯಪ್‌ ಗ್ರೂಪ್‌ ಬದುಕಿಸಿದೆ ಎನ್ನುತ್ತಾರೆ ದಯಾನಂದ್. ವೈಯಕ್ತಿಕವಾಗಿ ಸುಮಾರು ಹತ್ತು ವರ್ಷಗಳಿಂದ ಈ ಪುಣ್ಯದ ಕೆಲಸವನ್ನು ಅವರು ಮಾಡಿಕೊಂಡು ಬರುತ್ತಿದ್ದಾರಂತೆ. ಒಬ್ಬರ ಜೀವವನ್ನು ಉಳಿಸುವದಕ್ಕಿಂತ ದೊಡ್ಡ ಕಾಯಕ ಈ ಭೂಮಿಯ ಮೇಲೆ ಮತ್ತೇನಿದೆ ಅಲ್ಲವೇ?

ಅಂದ್ಹಾಗೆ ರಸ್ತೆ ಅಪಘಾತಗಳು ವಿಶ್ವದ ಯಾವುದೇ ರಸ್ತೆಗಳಲ್ಲೂ ಸಾಮಾನ್ಯ. ಆದರೆ ಭಾರತದಲ್ಲಿ ಅಪಘಾತದಲ್ಲಿ ಗಾಯಗೊಂಡುವರು ಸಾಯುವುದಕ್ಕೆ ಪ್ರಮುಖ ಕಾರಣ, ಸೂಕ್ತ ಸಮಯದಲ್ಲಿ ಪ್ರಾಥಮಿಕ ಚಿಕಿತ್ಸೆ ಸಿಗದೇ ಇರುವುದು ಎನ್ನುವುದು ಕಟು ಸತ್ಯವಾಗಿದೆ. ಹಾಗೆಯೇ ನಾವು ಅದೆಷ್ಟೋ ಜನರು ಅಪಘಾತವನ್ನು ನೋಡಿದಾಗ, ತಲೆನೋವು ಏಕೆ ಎಂದು ಜಾಣ ಮೌನ ವಹಿಸುತ್ತೇವೆ. ಹಾಗೆಯೇ ವಾಟ್ಸ್‌ಆ್ಯಪ್‌ನ್ನು ಬೇರೆ ಸಾಕಷ್ಟು ವಿಷಯಗಳಿಗೆ ಬಳಸಿಕೊಳ್ಳುತ್ತೇವೆ.

ಆದರೆ ದಯಾನಂದ್ ಹಾಗೂ ಸ್ನೇಹಿತರು ಇದನ್ನು ಒಂದು ಪುಣ್ಯದ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಶ್ಲಾಘನೀಯ ವಿಚಾರ. ಇಲ್ಲಿ ಕೆಲಸ ಮಾಡಿದ ಕೆಲವು ಪೊಲೀಸ್‌ ಅಧಿಕಾರಿಗಳು ಬೇರೆಡೆ ವರ್ಗಾವಣೆಯಾದಾಗ ಇಂತಹದೊಂದು ಗ್ರೂಪ್‌ ಮಡುವ ಪ್ರಯತ್ನ ಮಾಡಿದ್ದಾರಂತೆ. ಆದರೆ ನಿರೀಕ್ಷಿತ ಯಶಸ್ಸು ದೊರೆತಿಲ್ಲವಂತೆ. ದಯಾನಂದ್ ಅವರಂತೆ ಈ ರಾಜ್ಯದಲ್ಲಿರುವ ಪ್ರತಿ ಹೆದ್ದಾರಿಗೊಂದು ಇಂತಹ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿದರೆ ಪ್ರತಿ ದಿನ ಹತ್ತಾರು ಅಮಾಯಕ ಜೀವವನ್ನು ಉಳಿಸಬಹುದಾಗಿದೆ. ಅದೆಷ್ಟೋ ಕುಟುಂಬದ ನಗು ಮರೆಯಾಗದಂತೆ ಪ್ರಯತ್ನಿಸಬಹುದಾಗಿದೆ. ಒಂದಿಷ್ಟು ಆಸಕ್ತರು ಇಂತಹ ಪ್ರಯತ್ನಕ್ಕೆ ಮುಂದಾಗಬಹುದು. ನಾನೂ ಕೂಡ ತಯಾರಿದ್ದೇನೆ. 

ರಾಜೀವ ಹೆಗಡೆ

ಕ್ಷಮೆ ಇರಲಿ: ಈ ವಿಚಾರವನ್ನು ದಯಾನಂದ್ ಅವರು ನನ್ನ ಬಳಿ ಹೇಳುವಾಗ, ʼಇದನ್ನು ನಾನು ಎಲ್ಲಿಯೂ ಬರೆದುಕೊಂಡಿಲ್ಲ. ಹೆದ್ದಾರಿಯ ಬಗ್ಗೆ ನಿಮ್ಮ ಆಸಕ್ತಿ ನೋಡಿ ಹೇಳಿದೆʼ ಎಂದು ಮಾಹಿತಿ ನೀಡಿದ್ದರು. ಆದರೆ ಈ ವಿಚಾರವು ರಾಜ್ಯದ ಪ್ರತಿಯೊಂದು ಹೆದ್ದಾರಿಯಲ್ಲೂ ಅನುಷ್ಠಾನಕ್ಕೆ ಬರುವಂತಾಗಲಿ ಎನ್ನುವ ಕಾರಣದಿಂದ ಅವರಿಗೆ ತಿಳಿಸದೇ ಹಂಚಿಕೊಂಡಿದ್ದೇನೆ. ಇಂತಹ ಕೆಲಸಗಳು ಒಂದಿಷ್ಟು ಒಳ್ಳೆಯ ಮನಸ್ಸುಗಳನ್ನು ತಲುಪಬೇಕು. ಇದು ಇನ್ನಷ್ಟು ಜನರ ಜೀವ ಉಳಿಸಲು ಕಾರಣವಾಗಬಹುದು.

✍🏻 ರಾಜೀವ‌ ಹೆಗಡೆ

Leave a Reply

Your email address will not be published. Required fields are marked *

Back to top button