ಕರ್ನಾಟಕ ರಾಜಕೀಯಸಚಿವರ ಕಚೇರಿಯಿಂದ

ಘರ್ ವಾಪ್ಸಿ ಅಂತ ಮಾಡಿದ್ರೆ ಬಿಜೆಪಿ ಹಾಗೂ ಜೆಡಿಎಸ್ ಅರ್ಧ ಖಾಲಿಯಾಗುತ್ತೆ, ನಾವು ಆಪರೇಷನ್‌ ಮಾಡಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಘರ್‌ ವಾಪ್ಸಿ ಅಂತ ಮಾಡುವುದಕ್ಕೆ ನಾವು ಹೋದರೆ ಅರ್ಧ ಬಿಜೆಪಿ ಮತ್ತು ಜೆಡಿಎಸ್‌ ಅರ್ಧ ಖಾಲಿಯಾಗುತ್ತದೆ ಎಂದು ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ತತ್ವ ಹಾಗೂ ಸಿದ್ಧಾಂತ ಒಪ್ಪಿ ಬೇರೆ ಪಕ್ಷದವರು ಬರುವುದಾದರೆ ಸ್ವಾಗತ. ಯಾವುದೇ ಕಂಡೀಷನ್ ಇಲ್ಲದೆ ಬಂದರೆ ಸ್ವಾಗತವಿದೆ. ನಾವು ಆಪರೇಷನ್ ಹಸ್ತ ಮಾಡುವುದಕ್ಕೆ ಹೊರಟಿಲ್ಲ ಎಂದು ಹೇಳಿದರು.

ನಾವು ಬಿಜೆಪಿ, ಜೆಡಿಎಸ್ ಒಡೆಯಲು ಹೋಗುತ್ತಿಲ್ಲ. ಆ ಎರಡೂ ಪಕ್ಷಗಳನ್ನು ರಾಜ್ಯದ ಮತದಾರರು ಎಲ್ಲಿಡಬೇಕೊ ಅಲ್ಲಿ ಇಟ್ಟಿದ್ಧಾರೆ. ಬಿಜೆಪಿ ಹಾಗೂ ಜೆಡಿಎಸ್‌ನವರು ತಮ್ಮ ಅಸ್ತಿತ್ವ ಕಾಪಾಡಿಕೊಂಡು ಹೋದರೆ ಸಾಕು ಎಂದು ಹೇಳಿದರು.

ಸುಧಾಮ್ ದಾಸ್ ಅವರನ್ನು ಮೇಲ್ಮನೆಗೆ ನಾಮನಿರ್ದೇಶನ ಸಂಬಂಧ ಹಿರಿಯ ದಲಿತ ಸಚಿವರು ವಿರೋಧಿಸಿ ಹೈಕಮಾಂಡ್‌ಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿದ ಸಚಿವರು, ಸುಧಾಮ್ ದಾಸ್ ಅವರಿಗೆ ಅವಕಾಶ ಕೊಡಲೇಬಾರದು ಅಂತ ಏನೂ ಹೇಳಿಲ್ಲ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.

ಬಿ ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರನ್ನು ಬಿಜೆಪಿಯವರು ಹೇಗೆ ನಡೆಸಿಕೊಂಡರು ಅಂತ ಎಲ್ಲರಿಗೂ ಗೊತ್ತಿದೆ. ಬಿಎಸ್‌ವೈ ಅವರ ಮಾತು ಈಗ ನಡೆಯುತ್ತಿದ್ದರೆ ಇಷ್ಟು ಜನ ಬಿಜೆಪಿಯವರು ಬಿಟ್ಟು ಬರ್ತಾ ಇದ್ರಾ? ಎಂದು ಪ್ರಶ್ನಿಸಿದರು.

Leave a Reply

Your email address will not be published. Required fields are marked *

Back to top button