Breaking Newsಕರ್ನಾಟಕ ರಾಜಕೀಯ

ಬರ ನಿರ್ವಹಣೆ: ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ಟೀಕೆ | ಜವಾಬ್ದಾರಿ ಸರಿಯಾಗಿ ನಿರ್ವಹಿಸಿ ನ್ಯಾಯ ಒದಗಿಸಿ

ಬೆಂಗಳೂರು: ಬರ ಪರಿಸ್ಥಿತಿ ಎದುರಿಸಲು ಸರ್ಕಾರ ಸನ್ನದ್ಧ ಎಂದು ಹೇಳಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ರಾಜ್ಯದಲ್ಲಿ ತೀವ್ರ ಬರ ಇದ್ದಾಗ ಅದನ್ನು ಸರಿಯಾಗಿ ನಿರ್ವಹಿಸದ ರಾಜ್ಯ ಸರ್ಕಾರ ಎಲ್ಲವೂ ಸರಿ ಇದೆ ಎಂದು ಹೇಳಿಕೊಂಡಿದೆ. ಜನ ತೊಂದರೆಯಲ್ಲಿದ್ದರೂ ಅವರ ಕಷ್ಟಕ್ಕೆ ಸ್ಪಂದಿಸದೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದೆ.

ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧ ಹರಿ ಹಾಯ್ದಿದೆ.

ಮಾನ್ಯ ಪ್ರಿಯಾಂಕ್‌ ಖರ್ಗೆ ಅವರೇ,
ಬರ ಪರಿಸ್ಥಿತಿಯ ಮಾಹಿತಿ ನಿಮಗಿದೆ ಎಂದು ತೋರಿಸಲು ಪ್ರಯತ್ನಿಸುತ್ತಿದ್ದೀರೋ, ಅಥವಾ ನಿಮ್ಮದೇ ಪಕ್ಷ ಇದನ್ನು ನಿಭಾಯಿಸುವಲ್ಲಿ ಹೇಗೆ ಸೋತಿದೆ ಎಂದು ಪರೋಕ್ಷವಾಗಿ ತಿಳಿಸುತ್ತಿದ್ದೀರೋ?

ಕುಡಿಯುವ ನೀರಿನ ಸಮಸ್ಯೆ 37 ತಾಲೂಕುಗಳಲ್ಲಿ ಮಾತ್ರ ಎದುರಾಗಿದೆ ಎಂಬ ಮೂಲಕ ನಿಮ್ಮ ನಿರೀಕ್ಷೆ ಇನ್ನಷ್ಟು ಜಾಸ್ತಿಯಿತ್ತು ಎಂಬುದನ್ನೂ ತಾವು ತೋರಿಸಿಕೊಟ್ಟಿದ್ದೀರಿ. ಈಗಾಗಲೇ ಕಲುಷಿತ ನೀರಿಗೆ ಸಾಕಷ್ಟು ಜೀವಗಳು ಬಲಿಯಾಗಿವೆ, ಹೀಗಿರುವಾಗಲೂ ಎಲ್ಲಾ ಇಲಾಖೆಯ ಒಳಗೂ ಮೂಗು ತೂರಿಸುವ ನೀವು ಜಿಲ್ಲಾ ಸಿಇಒಗಳಿಗೆ ಸೂಚನೆ ನೀಡಿ ಕೈ ತೊಳೆದುಕೊಂಡರೆ ಸಾಕೇ?

ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಎಲ್ಲಾ ಸಚಿವಾಲಯಗಳ ಜವಾಬ್ದಾರಿಯನ್ನೂ ‌ಪ್ರಿಯಾಂಕ್‌ ಖರ್ಗೆಯವರಿಗೆ ಗುತ್ತಿಗೆ ನೀಡಿದ್ದಾರೆ. ತಮ್ಮ ಇಲಾಖೆಗಿಂತ ಬೇರೆ ಇಲಾಖೆಯ ಕಿಟಕಿಯಲ್ಲಿ ನೋಡುವುದೇ ಅವರಿಗೆ ಹೆಚ್ಚು ಆಪ್ಯಾಯಮಾನವಾದ ಕೆಲಸ ಎಂಬುದನ್ನು ರಾಜ್ಯದ ಜನ ಈ ಹಿಂದೆಯೂ ಕಂಡಿದ್ದಾರೆ.

ನಿರಂತರ ನಿರ್ಲಕ್ಷ್ಯಕ್ಕೆ ಒಳಗಾದ ಡಾ. ಪರಮೇಶ್ವರ್ ಅವರನ್ನೂ ಈ ಸರ್ಕಾರದಲ್ಲಿಯೂ ಸುಮ್ಮನೇ ಕೂರಿಸಿ ಆ ಜವಾಬ್ದಾರಿಗಳನ್ನೂ ಪ್ರಿಯಾಂಕ್‌ ಖರ್ಗೆಯವರಿಗೆ ನೀಡಲಾಗಿದ್ದು ಗೊತ್ತೇ ಇದೆ.

ಈಗ ಕಂದಾಯ ಇಲಾಖೆಯ ಜವಾಬ್ದಾರಿಯನ್ನೂ ಖರ್ಗೆಯವರು ಸಂಪೂರ್ಣವಾಗಿ ವಹಿಸಿಕೊಂಡಿದ್ದಾರೆ. ಅಂಕಿ-ಅಂಶ ನೀಡಿದ ಮಾತ್ರಕ್ಕೆ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅದನ್ನು ಪರಿಹರಿಸುವ ಜವಾಬ್ದಾರಿಯೇ ಇಲ್ಲದವರು ಮಾತನಾಡಿಯೂ ಪ್ರಯೋಜನವಿಲ್ಲ.

ಒಂದೆಡೆ ತಾವೇ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನೇ ಸರಿಯಾಗಿ ಅನುಷ್ಠಾನ ಮಾಡಲು ಹೆಣಗುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಯಾವುದನ್ನೂ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹದಗೆಟ್ಟ ಕಾನೂನು ಸುವ್ಯವಸ್ಥೆ, ನಿರಂತರ ನಡೆಯುತ್ತಿರುವ ರೈತರ ಆತ್ಮಹತ್ಯೆಯ ವಿಚಾರಗಳಿಗೆ ಪರಿಹಾರ ಮಾರ್ಗಗಳೇ ಕಾಣದಷ್ಟು ಕಾಂಗ್ರೆಸ್‌ ಆಡಳಿತ ಕುರುಡಾಗಿದೆ.

ಮಾನ್ಯ ಪ್ರಿಯಾಂಕ್‌ ಖರ್ಗೆ ಸಾಹೇಬರು ತಮ್ಮ ಗಮನವನ್ನು ರಾಜ್ಯಾದ್ಯಾಂತ ಹರಿಸುವ ಮೊದಲು ಅವರದೇ ತವರು ಜಿಲ್ಲೆಯ ಸಮಸ್ಯೆಗಳ ಕಡೆಗೆ ಮೊದಲು ಗಮನ ಹರಿಸಬೇಕು.

ಕಲಬುರ್ಗಿ ಮರಳು ಮಾಫಿಯಾ, ಪೊಲೀಸರ ಹತ್ಯೆ, ಪುಡಿ ರೌಡಿಗಳ ಗೂಂಡಾಗಿರಿ, ನಿಮ್ಮ ಬೆಂಬಲಿಗರಿಂದ ನಡೆಯುತ್ತಿರುವ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣಗಳ ಬಗ್ಗೆ ಒಂದಷ್ಟು ಅಂಕಿ-ಅಂಶಗಳನ್ನಾದರೂ ತರಿಸಿ ನೋಡುವುದು ಒಳಿತು. ನಿಮ್ಮ ಇಲಾಖೆ ಮತ್ತು ಕ್ಷೇತ್ರದ ಜನತೆ ನೀಡಿದ ಜವಾಬ್ದಾರಿಯನ್ನಾದರೂ ಸರಿಯಾಗಿ ನಿರ್ವಹಿಸಿ ಅದಕ್ಕೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *

Back to top button