Breaking Newsಕರ್ನಾಟಕ ರಾಜಕೀಯ

ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವುದು ಬಿಜೆಪಿ ಆಂತರಿಕ ವಿಚಾರ – ಯು ಟಿ ಖಾದರ್

ಬೆಂಗಳೂರು, ಆ.8- ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವುದು ಬಿಜೆಪಿ ಆಂತರಿಕ ವಿಚಾರ.ಆದರೆ, ನಾನು ಎಂದಿಗೂ ಪ್ರತಿಪಕ್ಷದ ಮಿತ್ರನಾದರೂ ಅವರಿಗೆ ನನ್ನ ಮೇಲಿನ ಸಂಶಯ ಹೋಗುವುದಿಲ್ಲ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದಲ್ಲಿಂದು ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠಗೊಳ್ಳಬೇಕಾದರೆ ವಿಧಾನಸಭಾ ಕಲಾಪಗಳು ಪರಿಣಾಮಕಾರಿಯಾಗಬೇಕು. ಆಗ ಉತ್ತಮ ಶಾಸನಗಳು ಜಾರಿಯಾಗಬಹುದು.

ಸರ್ಕಾರ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ವಿಪಕ್ಷಗಳು ಕಲಾಪದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸ್ಪೀಕರ್ ಪಾತ್ರವೂ ಮಹತ್ವದ್ದಾಗಿದೆ. ವಿಧಾನಸಭಾ ಕಲಾಪ ವ್ಯರ್ಥವಾಗದಂತೆ ನಿಭಾಯಿಸುವ ಹೊಣೆಗಾರಿಕೆ ಇದೆ ಎಂದು ತಿಳಿಸಿದರು.

ಶಾಸಕರ ಅಮಾನತು ವಿಚಾರ ಕುರಿತ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸಿದಾಗ ಸ್ಪೀಕರ್ ಆಗಿ ನಾನು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಇದು ಪಕ್ಷಪಾತಿ ಕ್ರಮವಲ್ಲ. ಶಾಸಕರ ಘನತೆ ಕಾಪಾಡಲು ನನ್ನ ಸಂಪೂರ್ಣ ಬೆಂಬಲವಿದೆ.

ಸದನದಲ್ಲಿ ಆರೋಪ-ಪ್ರತ್ಯಾರೋಪ ಸಹಜ. ಈ ನಡುವೆ ಕಲಾಪವನ್ನು ನಿರ್ದಿಷ್ಟ ಗುರಿಯತ್ತ ತಲುಪಿಸುವ ಗುರಿ ಸ್ಪೀಕರ್ ಮೇಲಿರುತ್ತದೆ, ಮಸೂದೆಯ ಬಗ್ಗೆ ಉತ್ತಮ ರೀತಿಯ ಚರ್ಚೆ ನಡೆದು, ಅದು ಕಾನೂನು ಆಗಿ ಜಾರಿಯಾದರೆ ಪ್ರಜೆಗಳಿಗೆ ಅನುಕೂಲವಾಗುತ್ತದೆ ಎಂದರು.

ಕನ್ನಡ ಭಾಷೆಯ ಬಗ್ಗೆ ಕೆಲವರು ಸಾಮಾಜಿಕ ‌ಜಾಲತಾಣದಗಳಲ್ಲಿ ಟ್ರೋಲ್ ಮಾಡಿದ್ದ ಕುರಿತು ಪ್ರತಿಕ್ರಿಯಿಸಿದ ಅವರು, ದೊಡ್ಡ ಸ್ಥಾನಕ್ಕೆ ನಾವು ಹೋಗಬೇಕಾದರೆ ಟ್ರೋಲ್ ಮಾಡುವವರ ಪಾತ್ರ ಇರುತ್ತದೆ, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳವುದಿಲ್ಲ.‌ಅಲ್ಲದೆ, ನಮಗೆ ಕನ್ನಡ ಪುಸ್ತಕಕ್ಕೆ ಮಾತ್ರ ಸೀಮಿತ. ಹೊರಗಡೆ ತುಳು ಭಾಷೆಯಲ್ಲಿಯೇ ಮಾತನಾಡುತ್ತೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ಪ್ರಧಾ ಕಾರ್ಯದರ್ಶಿ ಬಿ‌.ಪಿ.ಮಲ್ಲಪ್ಪ ಸೇರಿದಂತೆ ಪ್ರಮುಖರಿದ್ದರು.

Leave a Reply

Your email address will not be published. Required fields are marked *

Back to top button