Breaking Newsಕರ್ನಾಟಕ ರಾಜಕೀಯ

ಒಂದು ದೇಶ ಒಂದು ಚುನಾವಣೆ: ಬಿಜೆಪಿ – ಕಾಂಗ್ರೆಸ್‌ ನಾಯಕರ ನಡುವೆ ವಾಕ್ಸಮರ

ಬೆಂಗಳೂರು: ಒಂದು ದೇಶ ಒಂದು ಚುನಾವಣೆ ಜಾರಿಗೆ ಮುಂದಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆಗೆ ವಿರೋಧ ಪಕ್ಷಗಳು ಮುಗಿಬಿದ್ದಿವೆ. ಪ್ರಮುಖವಾಗಿ ಕಾಂಗ್ರೆಸ್‌ ಈ ಪ್ರಸ್ತಾವವನ್ನು ವಿರೋಧಿಸಿದೆ. ಇದು ಕಾರ್ಯ ಸಾಧುವಲ್ಲ. ಒಂದು ದೇಶ ಒಂದು ಚುನಾವಣೆ ನಡೆಸಲು ಸಾಕಷ್ಟು ಸಮಯ ಇಲ್ಲ ಎಂದು ಕೆಲವು ನಾಯಕರು ಹೇಳಿದರೆ, ಕೇಂದ್ರ ಸರ್ಕಾರ ತನ್ನ ಅಧಿಕಾರ ಅವಧಿಯನ್ನು ವಿಸ್ತರಿಸಿಕೊಳ್ಳಲು ಇಂತಹ ದುಸ್ಸಾಹಸಕ್ಕೆ ಮುಂದಾಗಿದೆ ಎಂದು ಕೆಲವರು ಹೇಳಿದ್ದಾರೆ.

ಇಷ್ಟು ವರ್ಷ ನೆನಪಾಗದ್ದು ಈಗ ಏಕೆ: ಎಚ್‌ ಕೆ ಪಾಟೀಲ್‌ ಪ್ರಶ್ನೆ
ʼಒಂದು ದೇಶ ಒಂದು ಚುನಾವಣೆʼ ಬಗ್ಗೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಈಗ ನೆನಪಾಗಿದೆ. ನಾಲ್ಕು ವರ್ಷ ಸುಮ್ಮನಿದ್ದ ಸರ್ಕಾರ ಈಗ ಕೊನೆ ಕ್ಷಣದಲ್ಲಿ ಅದೂ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭವಾದ ಸಮಯದಲ್ಲಿ ಒಂದು ದೇಶ ಒಂದು ಚುನಾವಣೆ ಬಗ್ಗೆ ಯಾಕೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ ಕೆ ಪಾಟೀಲ್‌ ಪ್ರಶ್ನಿಸಿದ್ದಾರೆ.

ʼಒಂದು ದೇಶ ಒಂದು ಚುನಾವಣೆʼ ನೆಪದಲ್ಲಿ ಕೇಂದ್ರ ಸರ್ಕಾರದ ಅವಧಿಯನ್ನು ಮುಂದೂಡುವ ಷಡ್ಯಂತ್ರ ನಡೆದರೆ ಜನ ಸಹಿಸಲ್ಲ. ಬಿಜೆಪಿ ಸರ್ಕಾರದ ಮೇಲೆ ಜನ ಈಗಾಗಲೇ ವಿಶ್ವಾಸ ಕಳೆದುಕೊಂಡಿದ್ದಾರೆ. ಅಧಿಕಾರದ ಅವಧಿ ಮುಂದಕ್ಕೆ ಹಾಕಿಕೊಳ್ಳಲು ಸರ್ಕಾರಕ್ಕೆ ಯಾವುದೇ ನೈತಿಕ ಹಕ್ಕು ಇಲ್ಲ. ಅಧಿಕಾರಕ್ಕಾಗಿ ಅಡ್ಡ ದಾರಿ ಹಿಡಿಯುವುದನ್ನು ದೇಶದ ನಾಗರಿಕರು ಕ್ಷಮಿಸಲಾರರು ಎಂದು ಹೇಳಿದ್ದಾರೆ.

ತರಾತುರಿಯಲ್ಲಿ ಆಗುವುದಿಲ್ಲ: ಬಿ ಎಲ್‌ ಶಂಕರ್‌
ಒಂದು ದೇಶ ಒಂದು ಚುನಾವಣೆ ತರಾತುರಿಯಲ್ಲಿ ಆಗುವುದಿಲ್ಲ. ಈ ಸಂಬಂಧ ಸಂವಿಧಾನಕ್ಕೆ ಐದು ತಿದ್ದುಪಡಿ ಆಗಬೇಕು. ಅರ್ಧಕ್ಕಿಂತ ಹೆಚ್ಚು ರಾಜ್ಯಗಳು ಆ ತಿದ್ದುಪಡಿಯನ್ನು ಅನುಮೋದನೆ ಮಾಡಬೇಕು. ಇತ್ತೀಚೆಗೆ ನಡೆದ ರಾಜ್ಯ ವಿಧಾನಭೆಗಳ ಅಧಿಕಾರದ ಅವಧಿಯನ್ನು ಕಡಿತ ಮಾಡಲು ಬರುವುದಿಲ್ಲ. ಯಾವುದೇ ಅಸೆಂಬ್ಲಿಯನ್ನು ಅದರ ಅವಧಿ ಮುಗಿಯುವ ಮೊದಲೇ ವಿಸರ್ಜನೆ ಮಾಡಲಾಗುವುದಿಲ್ಲ. ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಕೇಂದ್ರದ ಬಿಜೆಪಿ ಸರ್ಕಾರ ಒಂದು ದೇಶ ಒಂದು ಚುನಾವಣೆಗೆ ಮುಂದಾಗಿದೆ. ಅದರಲ್ಲೂ ಮಾಜಿ ರಾಷ್ಟ್ರಪತಿಗಳನ್ನು ಒಂದು ಸಣ್ಣ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿರುವುದು ಸರಿಯಲ್ಲ.

ಸಾಧಕ- ಬಾಧಕ ತಿಳಿದುಕೊಳ್ಳಬೇಕು: ಎಂ ಬಿ ಪಾಟೀಲ್‌
ಒಂದು ದೇಶ ಒಂದು ಚುನಾವಣೆ ಬಗ್ಗೆ ವ್ಯಾಪಕವಾದ ಚರ್ಚೆ ಆಗಬೇಕಿದೆ. ಎಲ್ಲಾ ರಾಜ್ಯಗಳ ಜೊತೆ ಚರ್ಚೆಯಾಗಬೇಕು. ಎಲ್ಲಾ ಪಕ್ಷಗಳ ಜೊತೆ ಮಾತನಾಡಬೇಕು. ಚುನಾವಣೆ ಎದುರಾದಾಗ ಒಂದು ಸಮಿತಿ ಮಾಡೋದಲ್ಲ. ಸಾಧಕ- ಬಾಧಕಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಚಿವ ಎಂ ಬಿ ಪಾಟೀಲ್‌ ಹೇಳಿದ್ಧಾರೆ.

ಒಂದು ದೇಶ ಒಂದು ಚುನಾವಣೆ ಅಂತ ಹೇಳೋ ಬಿಜೆಪಿ ದೇಶವನ್ನು ಒಂದಾಗಿರಲು ಬಿಟ್ಟಿಲ್ಲ. ಎಲ್ಲಾ ಒಡೆದಿದ್ದಾರೆ. ನೆಹರು ಕಲ್ಪನೆಯ ಒಂದು ದೇಶ ಈಗ ಉಳಿದಿಲ್ಲ ಎಂದು ಹೇಳಿದರು.

ಜನಕ್ಕೆ ಅನಾನುಕೂಲ ಆಗಬಾರದು: ಡಾ. ಸಿ ಎನ್‌ ಅಶ್ವತ್ಥ್‌ ನಾರಾಯಣ
ಎಲ್ಲಾ ಚುನಾವಣೆ ಒಟ್ಟಿಗೆ ಆಗಬೇಕು. ಬೇರೆ ಬೇರೆ ಅವಧಿಯಲ್ಲಿ ಆದರೆ ಜನರಿಗೆ ಅನಾನುಕೂಲ. ಆದ್ದರಿಂದ ಒಂದು ದೇಶ ಒಂದು ಚುನಾವಣೆ ಎಂಬುದು ಜನರ ಅಪೇಕ್ಷೆ. ಹಲವು ವರ್ಷದಿಂದ ಇತ್ತು. ಸಮಿತಿ ಮಾಡಿದ್ದಕ್ಕೂ ಆಕ್ಷೇಪ. ನಾಳೇನೆ ಮಾಡಲ್ಲ. ಪ್ರಕ್ರಿಯೆ ಆರಂಭ ಮಾಡಿದ್ದೇವೆ ಎಂದು ಮಾಜಿ ಸಚಿವ ಡಾ. ಸಿ ಎನ್‌ ಅಶ್ವತ್ಥ್‌ ನಾರಾಯಣ ಹೇಳಿದ್ದಾರೆ.

Leave a Reply

Your email address will not be published. Required fields are marked *

Back to top button