Breaking Newsಸಚಿವರ ಕಚೇರಿಯಿಂದ

ದಸರಾ ಗಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ ಆರಂಭವಾಗಿದ್ದು, ದಸರಾ ಆರಂಭಿಕ ಪ್ರಕ್ರಿಯೆಯಲ್ಲಿ, ದಸರಾ ಗಜಪಯಣಕ್ಕೆ ವೀರನ ಹೊಸಹಳ್ಳಿಯಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ವಿದ್ಯುಕ್ತವಾಗಿ ಚಾಲನೆ ನೀಡಿದರು.

ನಂತರ ನೆಡದ ಸಭೆಯಲ್ಲಿ ಸಚಿವ ಶ್ರೀ ಈಶ್ವರ ಖಂಡ್ರೆ ಮಾತನಾಡುತ್ತಾ, ನವರಾತ್ರಿ ದಸರಾ ನಮ್ಮ ನಾಡಹಬ್ಬ. ಮೈಸೂರು ದಸರಾ ಮಹೋತ್ಸವದಲ್ಲಿ ಜಂಬೂಸವಾರಿ ಪ್ರಧಾನ ಆಕರ್ಷಣೆ. ಆನೆಗಳ ಪಡೆ ಇಲ್ಲದೆ ದಸರಾ ಪೂರ್ಣವಾಗುವುದೇ ಇಲ್ಲ. ಹೀಗಾಗಿ ದಸರೆಗೂ ಅರಣ್ಯ ಇಲಾಖೆಗೂ ಅವಿನಾಭಾವ ಅನುಬಂಧವಿದೆ.

ಇತಿಹಾಸ ಪ್ರಸಿದ್ಧ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅರಮನೆಗಳ ನಗರಿಗೆ ಇಂದು ತೆರಳುತ್ತಿರುವ ಆನೆಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಕಾಡಿನಿಂದ ನಾಡಿನತ್ತ ಕಳುಹಿಸುವುದು ಹಿಂದಿನಿಂದ ಅನೂಚಾನವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ.

ಆಶ್ವಯುಜ ಶುದ್ಧ ದಶಮಿಯ ಅಕ್ಟೋಬರ್ 24ರಂದು ನಡೆಯಲಿರುವ ಜಂಬೂಸವಾರಿಯಲ್ಲಿ 57 ವರ್ಷದ ಅಭಿಮನ್ಯು ಈ ಬಾರಿಯೂ ಅಂಬಾರಿ ಹೊರಲಿದ್ದು, ಗಜ ಪಡೆಯ ಹಿಂದಿನ ಕ್ಯಾಪ್ಟನ್ ಅರ್ಜುನ ಈ ಬಾರಿಯೂ ನಿಶಾನೆ ಆನೆಯಾಗಿ  ಭಾಗಿಯಾಗುತ್ತಿದೆ. 

ದಸರಾ ಮಹೋತ್ಸವದಲ್ಲಿ ಒಟ್ಟು 14 ಆನೆಗಳು ಭಾಗಿಯಾಗುತ್ತಿದ್ದು, ಇಂದು 9 ಆನೆಗಳ ಮೊದಲ ತಂಡ ಇಲ್ಲಿಂದ ಮೈಸೂರು ನಗರಕ್ಕೆ ತನ್ನ ಪಯಣ ಆರಂಭಿಸಿದೆ. ಈ ಶುಭ ಸಂದರ್ಭದಲ್ಲಿ ಭಾಗಿಯಾಗಿ, ಗಜಪೂಜೆ ನೆರವೇರಿಸಲು ನಾನು ಅತೀವ ಸಂತೋಷ ಪಡುತ್ತೇನೆ.

ಹಿಂದೆ ಮೈಸೂರಿನ ಅಂದಿನ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಮತ್ತು ಆಸ್ಥಾನದವರು ಎಚ್.ಡಿ.ಕೋಟೆ ತಾಲೂಕು ಅಂತರ ಸಂತೆ ಬಳಿಯ ಮಾಸ್ತಿ ಗುಡಿ ಮತ್ತು ಮಾಸ್ತಮ್ಮನ ದೇವಸ್ಥಾನದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದ ತರುವಾಯ ಸಾಂಪ್ರದಾಯಿಕವಾಗಿ ಗಜ ಪಯಣ ಆರಂಭವಾಗುತ್ತಿತ್ತು ಎಂದು ನನಗೆ ತಿಳಿಸಲಾಗಿದೆ.

ಆಗ ಆನೆಗಳು ಸಾಗುವ ಮಾರ್ಗದ ಹಳ್ಳಿ ಹಳ್ಳಿಯಲ್ಲೂ ಜನರು ತಳಿರು ತೋರಣ ಕಟ್ಟಿ, ರಂಗವಲ್ಲಿ ಹಾಕಿ, ಆನೆಗಳಿಗೆ, ಬಾಳೆಹಣ್ಣು, ಅಕ್ಕಿ, ಬೆಲ್ಲ ಕೊಟ್ಟು ಪೂಜಿಸುತ್ತಿದ್ದರು. ಮನೆಗಳು, ಮಾವುತರು, ಕವಾಡಿಗರ ಇಡೀ ಕುಟುಂಬ ಕಾಲ್ನಡಿಗೆಯಲ್ಲಿ ಮೈಸೂರಿಗೆ ಬರುತ್ತಿತ್ತು. ಈಗ ಸಾಂಕೇತಿಕವಾಗಿ ಇಲ್ಲಿ ಆನೆಗಳು ಮತ್ತು ಮಾವುತರು ಸ್ವಲ್ಪ ದೂರ ಮಾತ್ರ ಹೆಜ್ಜೆ ಹಾಕಿದ ತರುವಾಯ ಲಾರಿಗಳಲ್ಲಿ ಆನೆಗಳನ್ನು ಮೈಸೂರಿಗೆ ಕಳುಹಿಸಲಾಗುತ್ತದೆ. ಆದರೂ ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ಎಲ್ಲ ರೀತಿಯ ವಿಧಿ ವಿಧಾನ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.

ದಸರಾ ಮಹೋತ್ಸವ ಯಶಸ್ವಿಯಾಗಿ, ವಿಜೃಂಭಣೆಯಿಂದ ನೆರವೇರಲಿ. ಅಧಿದೇವತೆ ನಾಡದೇವಿ ತಾಯಿ ಚಾಮುಂಡೇಶ್ವರಿಯ ಕೃಪಾಶೀರ್ವಾದ ರಾಜ್ಯದ ಮೇಲೆ ಇರಲಿ. ಉತ್ತಮ ಮಳೆ ಬೆಳೆ ಆಗಲಿ. ರಾಜ್ಯದಲ್ಲಿ ಸುಖ, ಸಮೃದ್ಧಿ ನೆಲೆಸಲಿ ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.

Leave a Reply

Your email address will not be published. Required fields are marked *

Back to top button