Breaking Newsಕರ್ನಾಟಕ ರಾಜಕೀಯ

ಜೆಡಿಎಸ್ ನ ಮುಳಬಾಗಿಲು ಶಾಸಕ ಮಂಜುನಾಥ್‌ ಗೆ ಕಾಂಗ್ರೆಸ್‌ ಗಾಳ | ಪಕ್ಷ ಬಿಡುವುದಿಲ್ಲ ಎಂದ ಶಾಸಕ

ಕೋಲಾರ: ಮುಳಬಾಗಿಲಿನ ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌ ಅವರಿಗೆ ಕಾಂಗ್ರೆಸ್‌ ಗಾಳ ಹಾಕುತ್ತಿದೆ. ಅವರನ್ನು ಪಕ್ಷಕ್ಕೆ ಕರೆತರಲು ಕಾಂಗ್ರೆಸ್‌ ಮುಖಂಡರು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈ ಬೆಳವಣಿಗೆಯನ್ನು ಮಂಜುನಾಥ್‌ ಅಲ್ಲಗಳೆದಿದ್ದಾರೆ. ಈ ಸಂಬಂಧ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

ಕಳೆದ ಬಾರಿ ಇವರೆಲ್ಲ ಡೆಲ್ಲಿಗೆ ಹೋದಾಗ ನನಗೂ ಕೂಡ ಬನ್ನಿ ಅಂತ ಕರೆ ಬಂದಿತ್ತು. ಆಗ ನಾನು ವಿದೇಶದಲ್ಲಿದ್ದೆ. ಹೋಗಲಿಲ್ಲ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಆದ್ದರಿಂದ ಕಾಂಗ್ರೆಸ್‌ನಲ್ಲೆ ತಳಮಳ ಶುರುವಾಗಿದೆ. ತನ್ನ ಪಕ್ಷದ ಶಾಸಕರು ಎಲ್ಲಿ ಹೊರಟು ಹೋಗುತ್ತಾರೊ ಎಂಬ ಭಯದಿಂದ ಕಾಂಗ್ರೆಸ್‌ನವರು ಈ ಆಟ ಆಡ್ತಾ ಇದ್ದಾರೆ.

ಅವರು ಬರುತ್ತಾರೆ, ಇವರು ಬರುತ್ತಾರೆ ಅಂತ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಎಂಟು ದಿನಗಳಲ್ಲಿ ಜೆಡಿಎಸ್‌ ನ 19 ಶಾಸಕರು ಒಂದೇ ವೇದಿಕೆಯಲ್ಲಿ ಕುಳಿತು ಸಭೆ ಮಾಡಲು ತೀರ್ಮಾನ ಮಾಡುತ್ತೇವೆ. ಇದರಲ್ಲಿ ಈ ಹಿಂದೆ ಸೋಲು ಅನುಭವಿಸಿದವರು, ಮಾಜಿ ಶಾಸಕರು ಎಲ್ಲಾ ಇರ್ತೇವೆ. ಈ ಬಗ್ಗೆ ನಮ್ಮ ಹೈಕಮಾಂಡ್‌ ತೀರ್ಮಾನಿಸಿದೆ.

ನಾವೆಲ್ಲ ಒಂದಾಗಿ ಮುಂದಿನ ಲೋಕಸಭಾ ಚುನಾವಣೆ ಹೇಗೆ ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ. ಎಲ್ಲಾ ಊಹಾಪೋಹಕ್ಕೆ ಕೇವಲ ಎಂಟು ದಿನದಲ್ಲಿ ಉತ್ತರ ಕೊಡ್ತೆವೆ.

ಕಾಂಗ್ರೆಸ್‌ನವರಿಗೆ ದೆಹಲಿಯಿಂದ ಯಾವ ಬೆದರಿಕೆ ಒಡ್ಡಿದ್ದಾರೋ ಗೊತ್ತಿಲ್ಲ, 20 ಸ್ಥಾನ ಗೆಲ್ಲಲೇ ಬೇಕು ಎಂದು ಹೇಳಿರಬಹುದು. ಅದಕ್ಕೆ ಇವರು ಈ ಸರ್ಕಸ್‌ ಮಾಡ್ತಾ ಇದ್ಧಾರೆ. ಹಣೆ ಬರಹವನ್ನು ಈಗಾಗಲೇ ಜನ ಬರೆದಿದ್ದಾರೆ. ಮುಂದೆ ಬರೆಯೋರು ಅವರೇ. ಈಗಾಗಲೇ ರಾಜ್ಯದ ಹಣೆಬರಹ ಬರೆದಿದ್ದಾರೆ, ಮುಂದೆ ದೆಹಲಿಯ ಹಣೆ ಬರಹ ಬರೆಯುತ್ತಾರೆ.

ಯಾರಿಗೆ ಅಧಿಕಾರ ಕೊಡಬೇಕು ಅನ್ನೊದನ್ನು ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಏನೇ ತಿಪ್ಪರಲಾಗ ಹಾಕಿದರೂ ಸರ್ಕಸ್‌ ಮಾಡಿದರೂ ಜನ ಏನು ಬರೆಯುತ್ತಾರೋ ಅದೇ ಬರೆಯುತ್ತಾರೆ. ಅದು ಬಿಟ್ಟು ಶಾಸಕರನ್ನು ದಿಕ್ಕು ತಪ್ಪಿಸಿ ಅಷ್ಟು ತಗೋತೀವಿ ಅನ್ನೋದು ಸುಳ್ಳು.

ಯಾರೂ ಪಕ್ಷ ಬಿಡುವುದಿಲ್ಲ. ಸೌಜನ್ಯಕ್ಕೂ ನಾವು ಅನುದಾನ ಕೇಳಲು ಹೋಗ್ತ ಇಲ್ಲ. ಈವರೆಗೆ ಮುಖ್ಯಮಂತ್ರಿ ಇಲ್ಲವೇ ಉಪ ಮುಖ್ಯಮಂತ್ರಿಯವರನ್ನು ನಾನು ಭೇಟಿ ಮಾಡಿಲ್ಲ. ಭೇಟಿ ಮಾಡಲು ಹೋದರೆ ಎಲ್ಲಿ ಕಥೆ ಕಟ್ಟುತ್ತಾರೋ ಎಂಬ ಭಯ ನನಗೆ.

ಹೂ ಕಟ್ಟುವವರ ಹತ್ರ, ಎಳನೀರು ಮಾರುವವರ ಹತ್ರ ಹೋಗಿ ಕೇಳಿ ಈ ಸರ್ಕಾರ ಇರುತ್ತಾ ಅಂತ. ಅವರೇ ಹೇಳುತ್ತಾರೆ.

ರಾಜಕಾರಣ ಒಂದು ಐಪಿಎಲ್‌ ಮ್ಯಾಚ್‌ ಇದ್ದ ಹಾಗೆ ಒಂದೊಂದು ಟಿ ಶರ್ಟ್‌ ಹಾಕಿಕೊಂಡು ಫೀಲ್ಡ್‌ ಗೆ ಬಂದಾಗ ಈ ತಂಡ ಅಂತ ಗೊತ್ತಾಗುತ್ತೆ. ಎಂ ಪಿ ಚುನಾವಣೆಯಲ್ಲಿ ಯಾರು ಯಾರು ಯಾವ ಟಿ ಶರ್ಟ್‌ ಹಾಕೊತ್ತಾರೆ ತಿಳಿಯುತ್ತೆ.

Leave a Reply

Your email address will not be published. Required fields are marked *

Back to top button