Breaking Newsಕರ್ನಾಟಕ ರಾಜಕೀಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ ಏಕೆ? |ಬಜೆಟ್ ನಲ್ಲಿ ಘೋಷಣೆಯಾದ ಹಣ, ಗ್ಯಾರಂಟಿ ಯೋಜನೆಗಳಿಗೆ ಬಳಸಿರಬಹುದು ಎಂಬ ಅನುಮಾನ : ಮುಖ್ಯಮಂತ್ರಿ ಚಂದ್ರು

ತುಮಕೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡದೆ ಅನ್ಯಾಯ ಎಸಗಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಕಿಡಿಕಾರಿದರು.

ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಚಂದ್ರು ಅವರು ತುಮಕೂರು ಜಿಲ್ಲೆಗೆ ಭೇಟಿ ನೀಡಿರುವ ಹಿನ್ನೆಲೆ ನಗರದ ಸುಧಾ ಟೀ ಹೌಸ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದರು.

ಯಾವುದೇ ರಾಜ್ಯ ತನ್ನ ಭಾಷೆ, ತನ್ನ ಸಂಸ್ಕೃತಿ, ತನ್ನ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸದೇ ಇದ್ದಲ್ಲಿ ಆ ರಾಜ್ಯ ಇದ್ದೂ ಪ್ರಯೋಜನವಿಲ್ಲ. ಒಂದು ದೇಶ, ಒಂದು ರಾಜ್ಯದ ವ್ಯವಸ್ಥೆ ಚೆನ್ನಾಗಿರಬೇಕು ಎಂದರೆ ಅಲ್ಲಿನ ಸಾಂಸ್ಕೃತಿಕ ನೆಲೆ ಚೆನ್ನಾಗಿರಬೇಕು. ನಮ್ಮ ಪದ್ಧತಿ, ನಮ್ಮ ಸಂಪ್ರದಾಯದ ಹಿತದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಎಷ್ಟು ಹಣ ಕೊಟ್ಟಿದ್ದೀರಿ? ಎಂದು ರಾಜ್ಯ ಸರ್ಕಾರವನ್ನು ಮು.ಚಂದ್ರು ಪ್ರಶ್ನಿಸಿದರು.

ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಒಂದು ಪೈಸೆ ದುಡ್ಡು ಬಿಡುಗಡೆ ಮಾಡಿಲ್ಲ. ಆ ಇಲಾಖೆ ಕೆಲಸ ಹೇಗೆ ಮಾಡಬೇಕು? ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾಷಾ ಪ್ರಾಧಿಕಾರ, ಪುಸ್ತರ ಪ್ರಾಧಿಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ ಎಂಬ 4 ಪ್ರಾಧಿಕಾರಗಳನ್ನು ಮಾಡಿದ್ದಾರೆ. 14 ಅಕಾಡೆಮಿಗಳು, 4 ರಂಗಾಯಣಗಳು, ಕರಾವಳಿ ಭಾಗದಲ್ಲಿ 2 ಯಕ್ಷಗಾನ ಮತ್ತು ವೃತ್ತಿ ರಂಗಭೂಮಿಗಳನ್ನು ಮಾಡಿದ್ದಾರೆ ಎಂಬುದು ಸಂತೋಷದ ವಿಚಾರ. ಆದರೆ ಒಂದಕ್ಕೂ ಕೂಡ ಪದಾಧಿಕಾರಿಗಳನ್ನು ಆಯ್ಕೆ ಮಾಡದಿದ್ದರೆ, ಹಣ ಬಿಡುಗಡೆ ಮಾಡದಿದ್ದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.

ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಘೋಷಣೆ ಮಾಡಿದ ಹಣ ಎಲ್ಲಿದೆ? ಅದನ್ನೂ ಗ್ಯಾರಂಟಿ ಯೋಜನೆಗಳಿಗೆ ಬಳಸಿರಬಹುದು ಎಂಬ ಅನುಮಾನ ಕಾಡುತ್ತಿದೆ. ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ದುಡ್ಡನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾರೆ. ಪರಿಶಿಷ್ಟ ವರ್ಗದವರಿಗೆ ಇಟ್ಟಿರುವ ಹಣ ಗ್ಯಾರಂಟಿ ಯೋಜನೆಗಳ ಮೂಲಕ ಅವರಿಗೆ ತಲುಪುತ್ತಿದೆ ಎಂದು ಸಿಎಂ ಸಿದ್ದರಾಮಯ್ಯನವರು ಸಮಜಾಯಿಷಿ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಕೇವಲ ಪರಿಶಿಷ್ಟರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಿದೆಯೇ? ಒಂದು ವರ್ಗಕ್ಕೆ ಇಟ್ಟಿರುವ ಅನುದಾನವನ್ನು ಬೇರೆಲ್ಲ ವರ್ಗಕ್ಕೆ ಹಂಚುವುದು ತಾರತಮ್ಯವಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕುಶಲಾ ಸ್ವಾಮಿ ರಾಜ್ಯ ಉಪಾಧ್ಯಕ್ಷರು ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸುರೇಶ್‌ ರಾಥೋಡ್‌, ಸಂಘಟನಾ ಕಾರ್ಯದರ್ಶಿ ರಾಮಾಂಜನಪ್ಪ, ಪ್ರಧಾನ ಕಾರ್ಯದರ್ಶಿ ಮದುಸೂದನ್‌, ಮುಖಂಡರಾದ ಬಸವರಾಜ್ ಮುದಿಗೌಡರ್, ರವಿ ಕುಮಾರ್, ಜಯರಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button