ಕರ್ನಾಟಕ ರಾಜಕೀಯಜನ-ಪ್ರತಿನಿಧಿನಮ್ಮ ಶಾಸಕರುಶಾಸಕ ವಾರ್ತೆ

ಮಲ್ಲೇಶ್ವರದ ಹ್ಯಾಟ್ರಿಕ್‌ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಹ್ಯಾಟ್ರಿಕ್ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ವೈದ್ಯಕೀಯ ಪದವೀಧರ. ಬೆಂಗಳೂರಿನ ರಾಜಾಜಿನಗರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಶ್ವತ್ಥ್, ಬಾಲ್ಯದಿಂದಲೂ ಓದಿನಲ್ಲಿ ಮುಂದಿರುತ್ತಿದ್ದರು. ಯಶವಂತಪುರದ ಚಂದ್ರೋದಯ ಶಾಲೆಯಲ್ಲಿ ಪ್ರಾಥಮಿಕ, ಮಲ್ಲೇಶ್ವರದ ಬಿ.ಪಿ.ಇಂಡಿಯನ್ ಶಾಲೆಯಲ್ಲಿ ಪ್ರೌಢ ಹಾಗೂ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು.

ಎಂಬಿಬಿಎಸ್‌ ವ್ಯಾಸಂಗಕ್ಕಾಗಿ ಮಂಗಳೂರಿನ ಕಸ್ತೂರ ಬಾ ವೈದ್ಯಕೀಯ ಮಹಾವಿದ್ಯಾಲಯ ಸೇರಿದ ಅವರು, 1991ರಲ್ಲಿ ಅದೇ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ವೈದ್ಯ ವೃತ್ತಿಯ ಇಂಟರ್‌ಶಿಪ್‌ಗಾಗಿ 1994ರಲ್ಲಿ ಬೆಂಗಳೂರಿಗೆ ಬಂದ ಅವರು, ಕರ್ನಾಟಕ ಜೂನಿಯರ್ಸ್ ಡಾಕ್ಟರ್ ಅಸೋಸಿಯೇಷನ್‌ ಅಧ್ಯಕ್ಷರಾಗಿ ಆಯ್ಕೆಗೊಂಡರು. 

1995ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕವಾಗುವ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಾರಂಭಿಸಿದರು. ವಿದ್ಯಾರ್ಥಿಗಳ ಪರವಾಗಿ ಹೋರಾಟ ಆರಂಭಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ನಂತರ, ಅದೇ ವಿವಿಯ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡರು. 2003ರ ಸೆಪ್ಟೆಂಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶಿಸಿದರು.

2006ರಿಂದ 2010ರವರೆಗೆ ಬಿಜೆಪಿ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷರಾಗಿದ್ದ ಅವರು, ಪಕ್ಷದ ಸಂಘಟನೆಗೆ ಒತ್ತು ನೀಡಿದರು. 2004ರಲ್ಲಿ ಮೊದಲ ಬಾರಿಗೆ ಮಲ್ಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪರಾಭವಗೊಂಡರು. ಅದಕ್ಕೆ ಎದೆಗುಂದದೇ ಮಲ್ಲೇಶ್ವರದಲ್ಲೇ ಸಮಾಜ ಸೇವೆ ಮಾಡತೊಡಗಿದರು. ಅದರ ಫಲವಾಗಿ 2008ರಿಂದ ಸತತವಾಗಿ ಮೂರನೇ ಬಾರಿ ಮಲ್ಲೇಶ್ವರದ ಶಾಸಕರಾಗಿ ಆಯ್ಕೆ ಆಗಿದ್ದಾರೆ.

ಅಶ್ವತ್ಥನಾರಾಯಣ ಅವರ ಪತ್ನಿ ಶ್ರುತಿ, ಪದ್ಮಶ್ರೀ ಮೆಡಿಕೇರ್ ಪ್ರೈ. ಲಿ. ನಡೆಸುತ್ತಿದ್ದಾರೆ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜನರ ಆರೋಗ್ಯ ರಕ್ಷಣೆ ಮಾಡಬೇಕು ಎಂದಾಗಲೆಲ್ಲ ಶಾಸಕ ಅಶ್ವತ್ಥನಾರಾಯಣ ಅವರು ಸ್ಟೆಥಸ್ಕೋಪ್‌ ಹಿಡಿಯುತ್ತಾರೆ.

Leave a Reply

Your email address will not be published. Required fields are marked *

Back to top button