Breaking Newsಸಚಿವರ ಕಚೇರಿಯಿಂದ

ಕರ್ನಾಟಕಕ್ಕೆ ಬಂಟರ ಕೊಡುಗೆ ಅಪಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ವಿಶ್ವ ಬಂಟರ ಸಮ್ಮೇಳನದಲ್ಲಿ ಸಚಿವರ ಹೇಳಿಕೆ

ಉಡುಪಿ : ಕರ್ನಾಟಕಕ್ಕೆ, ಇಡೀ ಸಮಾಜಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ, ಎಲ್ಲೆ ಹೋದರೂ ತಮ್ಮತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದರು.

ಉಡುಪಿಯ ಅಜ್ಜರಕಾಡಿನ ಮಹಾತ್ಮ ಗಾಂಧಿ ಮೈದಾನದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ‘ವಿಶ್ವ ಬಂಟರ ಸಮ್ಮೇಳನ’ದಲ್ಲಿ ಮಾತನಾಡಿದ ಸಚಿವರು, ಕಲೆ, ಕ್ರೀಡೆ, ಸಾಹಿತ್ಯ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಬಂಟರ ಸಮುದಾಯದವರನ್ನು ಕಾಣಬಹುದು. ಸ್ವಾತಂತ್ರ್ಯ ಹೋರಾಟದಲ್ಲೂ ಸಮುದಾಯದ ಹಲವು ಮಂದಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿದರು.

ಹೊರ ರಾಜ್ಯ, ವಿದೇಶಗಳಲ್ಲಿ ಇರುವ ಬಂಟ ಸಮುದಾಯದವರನ್ನ ಒಗ್ಗೂಡಿಸುವ ಕೆಲಸವನ್ನು ಉಡುಪಿ-ಮಂಗಳೂರು ಬಂಟ ಸಮಾಜದವರು ಈ ಸಮ್ಮೇಳನದ ಮೂಲಕ ಮಾಡಿದ್ದಾರೆ ಎಂದರು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನನ್ನ ತವರು ಬೆಳಗಾವಿಯಲ್ಲಿ ಬಂಟ ಸಮುದಾಯದವರ ಜೊತೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹೋಟೆಲ್ ಉದ್ಯಮಕ್ಕೆ ಬಂಟರ ಕೊಡುಗೆ ಅನನ್ಯ. ಬಂಟರ ಸಾಧನೆ ನೋಡಿದರೆ ಈ ಸಮುದಾಯದ ಮೇಲೆ ದೇವರ ಆಶೀರ್ವಾದವಿದೆ ಅಂತಾನೆ ಅರ್ಥ ಎಂದರು.

ಬಂಟ ಸಮುದಾಯ ಹೃದಯ ಶ್ರೀಮಂತಿಕೆಯ ಸಮಾಜ, ತಾವು ಬೇಳಿತಾರೆ, ಇತರ ಸಮಾಜದವರನ್ನು ಒಟ್ಟಿಗೆ ಕರೆದೊಯ್ಯುತ್ತಾರೆ. ವಿಶ್ವ ಬಂಟರ ಸಮ್ಮೇಳನ ಯಶಸ್ವಿಯಾಗಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹಾರಿಸಿದರು. ವಿಶ್ವ ಬಂಟರ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಈ ವೇಳೆ ಉಡುಪಿಯ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು, ವಿಧಾನಸಭೆಯ ಸಭಾಪತಿಗಳಾದ ಯು.ಟಿ.ಖಾದರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಶಾಸಕರಾದ ಗಣೇಶ್ ಹುಕ್ಕೇರಿ, ಯಶ್ಪಾಲ್ ಸುವರ್ಣ, ಅಶೋಕ್ ಕುಮಾರ್ ರೈ, ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಮಾನಾಥ್ ರೈ, ವಿಶೇಷ ಅತಿಥಿಗಳಾಗಿ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಎಂ.ಆರ್.ಜಿ ಗ್ರೂಪ್ ನ ಕೆ.ಪ್ರಕಾಶ್ ಶೆಟ್ಟಿ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಅಭಯ ಚಂದ್ರ ಜೈನ್, ಜಿ.ಎ.ಭಾವ ಸೇರಿದಂತೆ ಹಲವು ಮುಖಂಡರು ಸೇರಿದಂತೆ ಬಂಟರ ಸಮುದಾಯದ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button