Breaking Newsಸಚಿವರ ಕಚೇರಿಯಿಂದ

ಬರಪೀಡಿತ ತಾಲೂಕುಗಳಿಗೆ ಹಣದ ಬದಲು ಅಕ್ಕಿ: ಆಹಾರ ಸಚಿವ ಕೆ ಎಚ್‌ ಮುನಿಯಪ್ಪ

ಬೆಂಗಳೂರು: ಬರಪೀಡಿತ ತಾಲೂಕುಗಳಿಗೆ ಹಣದ ಬದಲು ಅಕ್ಕಿ ನೀಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್‌ ಮುನಿಯಪ್ಪ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ತೀವ್ರ ಮಳೆಯ ಕೊರತೆಯಿಂದ 114 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಈ ಎಲ್ಲಾ ತಾಲೂಕುಗಳಲ್ಲಿ ಬರ ಘೋಷಣೆಗೆ ಸಿದ್ಧತೆ ನಡೆಸಲಾಗಿದೆ. ಈ ತಾಲೂಕುಗಳಿಗೆ 10 ಕೆ ಜಿ ಅಕ್ಕಿ ವಿತರಣೆಗೆ ಸಿದ್ದತೆ ನಡೆದಿದೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಅನ್ನಭಾಗ್ಯ ದಡಿ ಅಕ್ಕಿ ನೀಡಲು ಸಾಕಾಗುವಷ್ಟು ಅಕ್ಕಿ ಲಭ್ಯವಾಗದ ಕಾರಣ ಐದು ಕೆ ಜಿ ಅಕ್ಕಿ ಬದಲು ಹಣ ನೀಡಲು ಸರ್ಕಾರ ತೀರ್ಮಾನಿಸಿತ್ತು.

ವಿಧಾನಸಭಾ ಚುನಾವಣೆಗೆ ಮೊದಲು ರಾಜ್ಯದ ಜನರಿಗೆ ನೀಡಿದ ಭರವಸೆಯಂತೆ 10 ಕೆ ಜಿ ಅಕ್ಕಿ ನೀಡಲು ಕಾಂಗ್ರೆಸ್ ಸರ್ಕಾರ ಕ್ರಮ ಕೈಗೊಂಡಿದೆ. ಅಕ್ಕಿ ಕೊಡಲು ಸದ್ಯ ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಡ ಸರ್ಕಾರಗಳು ಮುಂದೆ ಬಂದಿವೆ ಎಂದರು.

ಈ ಸಂಬಂಧ ಟೆಂಡರ್‌ ನಡೆಯುತ್ತಿದೆ. ಒಂದು ವಾರದಲ್ಲಿ ಅಂತಿಮವಾಗಲಿದೆ. ಆದಷ್ಟು ಬೇಗ ಅಕ್ಕಿ ನೀಡಲಾಗುವುದು ಎಂದು ವಿವರಿಸಿದರು.

ನಮ್ಮ ದೇಶದಲ್ಲಿ ಶೇ 35 ರಿಂದ 37 ರಷ್ಟು ಬಡತನ ರೇಖೆಗಿಂತ ಕೆಳಗಿನ ಜನರಿದ್ದಾರೆ. ಯುಪಿಎ ಸರ್ಕಾರ ಇದ್ದಾಗ ಆಹಾರ ಭದ್ರತಾ ಕಾಯ್ದೆ ತರಲಾಗಿತ್ತು. ನರೇಗಾ ಯೋಜನೆ ತಂದಿದ್ದೆವು. ಆಹಾರ ಭದ್ರತಾ ಕಾಯ್ದೆಯಿಂದ ಜನರಿಗೆ ಅನುಕೂಲ ಆಗುತ್ತಿದೆ ಎಂದರು.

Leave a Reply

Your email address will not be published. Required fields are marked *

Back to top button