Breaking Newsಮುಖ್ಯಮಂತ್ರಿ ನ್ಯೂಸ್

ನಾಳೆಯೇ ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಸಲ್ಲಿಕೆ: ಸಿಎಂ ಸಿದ್ದರಾಮಯ್ಯ

ಶಾಂತಿಯುತ ಬಂದ್ ಆಚರಣೆಗೆ ಸಾರ್ವಜನಿಕರನ್ನು ಅಭಿನಂದಿಸಿದ ಸಿಎಂ

ಬೆಂಗಳೂರು, ಸೆಪ್ಟೆಂಬರ್ 29: ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ನಾಳೆಯೇ ನಮ್ಮ ಬಳಿ ನೀರು ಇಲ್ಲ, ನೀರು ಬಿಡಲು ಸಾಧ್ಯವಿಲ್ಲ ಎಂದು ಮರುಪರಿಶೀಲನಾ ಅರ್ಜಿ ಹಾಕಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಅಡ್ವೊಕೇಟ್ ಜನರಲ್ ಅವರೊಂದಿಗೆ ನಡೆದ ಸಭೆಯ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಶಾಂತಿಯುತವಾಗಿ ಬಂದ್ ನಡೆದಿದ್ದು, ಇದಕ್ಕೆ ಸಹಕರಿಸಿದ ಸಾರ್ವಜನಿಕರನ್ನು, ಸಂಘ ಸಂಸ್ಥೆಗಳಿಗೆ, ಅಭಿನಂದಿಸಿದ ಮುಖ್ಯಮಂತ್ರಿಗಳು ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ ಅಧಿಕಾರಿಗಳನ್ನು ಕೂಡ ಅಭಿನಂದಿಸಿದರು.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೊಕೇಟ್ ಜನರಲ್ ಗಳು ಸಭೆಯಲ್ಲಿ ಭಾಗವಹಿಸಿದ್ದರು. ಅವರ ಅನುಭವದ ಆಧಾರದ ಮೇಲೆ ಕೆಲವು ಅಭಿಪ್ರಾಯ, ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳನ್ನು ಪರಿಗಣಿಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ಪರಿಣಿತರ ಸಲಹಾ ಸಮಿತಿ

ಮುಖ್ಯವಾಗಿ ರಾಜ್ಯದ ನೀರಾವರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪರಿಣಿತರ ಸಲಹಾ ಸಮಿತಿಯನ್ನು ರಚಿಸಿ, ಡಾಟಾ ಸಂಗ್ರಹ , ಸಲಹೆ ನೀಡುವ ಕಾರ್ಯವನ್ನು ಮಾಡಬೇಕು. ಅಂತರರಾಜ್ಯ ಜಲವಿವಾದಗಳ ಬಗ್ಗೆ ಸರ್ಕಾರಕ್ಕೆ ಸಲಹೆ ಸೂಚನೆ, ಕಾನೂನು ತಂಡಕ್ಕೆ ಮಾಹಿತಿ ನೀಡಲು ಕೂಡ ಸಮಿತಿ ಅಗತ್ಯ ಎನ್ನುವ ಸಲಹೆ ಬಂದಿದೆ. ಇದರಂತೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲ ಹಾಗಾಗಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ಹಳೇ ಬಾಕಿ ಸರಿದೂಗಿಸಬೇಕು ಎಂದು 3000 ಕ್ಯೂಸೆಕ್ ನೀಡಲು ಸೂಚಿಸಿದ್ದಾರೆ. ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ಮರುಪರಿಶೀಲನಾ ಅರ್ಜಿ ಹಾಕುವಂತೆಯೂ ಸೂಚಿಸಿದ್ದಾರೆ ಎಂದರು.

ಮೇಕೆದಾಟು ಯೋಜನೆಗೆ ತೀವ್ರವಾಗಿ ಒತ್ತಾಯ

ಮೇಕೆದಾಟು ಯೋಜನೆಯ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪ ಮಾಡಬೇಕು. ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆ ಇಲ್ಲ. ಹಾಗಾಗಿ ತೀವ್ರವಾಗಿ ಇದನ್ನು ಮಂಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಮೇಕೆದಾಟು ಬ್ಯಾಲೆನ್ಸಿಂಗ್ ಜಲಾಶಯವಾಗಿ 67 ಟಿಎಂಸಿ ನೀರು ಸಂಗ್ರಹ ಮಾಡುವ ಸಾಮರ್ಥ್ಯ ಹೊಂದಲಿದೆ. ವಿದ್ಯುತ್ ಹಾಗೂ ಕುಡಿಯುವ ನೀರಿಗೆ ಅದನ್ನು ಬಳಸಲಾಗುವುದು. ಸಂಕಷ್ಟ ಬಂದಾಗ ತಮಿಳುನಾಡಿಗೆ ನೀರು ಬಿಡಬಹುದು ಎಂದು ಸಲಹೆ ನೀಡಿದ್ದಾರೆ ಎಂದರು.

ಸಂದರ್ಭ ಬಂದರೆ ವಿಶೇಷ ಅಧಿವೇಶ ಕರೆಯಲಾಗುವುದು. ಉದ್ದೇಶಪೂರ್ವಕವಾಗಿ ಆದೇಶ ಪಾಲನೆಯಾಗದಿದ್ದಾಗ ಮಾತ್ರ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ರಾಜಕೀಯ ಸಲಹೆಗಾರರಾದ ನಸೀರ್ ಅಹಮದ್, ಕಾನೂನು ಸಲಹೆಗಾರರಾದ ಪೊನ್ನಣ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button