Breaking Newsಕರ್ನಾಟಕ ರಾಜಕೀಯ

ಅಂತ್ಯವಿಲ್ಲದ ಹೈಕಮಾಂಡ್ ಕೃಪಾಪೋಷಿತ ಅಕ್ರಮಗಳಿಗೆ ಕೊನೆ ಎಂಬುದಿಲ್ಲವೇ?: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಕಿಡಿ

ಹೆಚ್ಡಿಕೆ ಬಗ್ಗೆ ಮಾತನಾಡಿದ ಡಿಸಿಎಂ ಗೆ ತಿರುಗೇಟು ಕೊಟ್ಟ ದಳ


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ನಾಲಿಗೆ ಹರಿಯಬಿಟ್ಟಿದ್ದ ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಜೆಡಿಎಸ್ ಪಕ್ಷ ತೀವ್ರ ಟೀಕಾಪ್ರಹಾರ ನಡೆಸಿದೆ.

ಈ ವ್ಯಕ್ತಿ ರಾಜ್ಯದ ಉಪ ಮುಖ್ಯಮಂತ್ರಿ. ಅದೇ ಕನ್ನಡಿಗರ ಪಾಲಿನ ದೌರ್ಭಾಗ್ಯ ಎಂದು ಜೆಡಿಎಸ್ ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದೆ.

ಜೆಡಿಎಸ್ ಹೇಳಿರುವುದೇನು?:

ಅವರು ರಾಜ್ಯಕ್ಕೆ ಉಪ ಮುಖ್ಯಮಂತ್ರಿ. ಅವರನ್ನು ‘ಮೂರ್ಖ ಶಿಖಾಮಣಿ ‘ ಎನ್ನುವುದು ತರವಲ್ಲ. ಅಸಲಿಗೆ, ಹಾಗೆಂದು ಹೇಳಲು ನಮಗೂ ಇಷ್ಟವಿಲ್ಲ ಬಿಡಿ. ಲೂಟಿಯನ್ನೇ ನಿತ್ಯಕಾಯಕ, ದಂಧೆಯನ್ನೇ ದಿನವಹಿ ಧನಾರ್ಜನೆಗೆ ರಹದಾರಿ ಮಾಡಿಕೊಂಡಿರುವ, ಕಂಡ ಕಂಡವರ ಜಮೀನುಗಳಿಗೆ ಬೇಲಿ ಬಿಗಿದು ಅವರ ರಕ್ತ ಹಿರುತ್ತಿರುವ ವ್ಯಕ್ತಿ ರಾಜ್ಯಕ್ಕೆ ಉಪ ಮುಖ್ಯಮಂತ್ರಿ!! ಇದಲ್ಲವೇ ಕನ್ನಡಿಗರ ದೌರ್ಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ ಜೆಡಿಎಸ್.

ಅವರ ‘ಅಂತ್ಯವಿಲ್ಲದ ಹೈ ಕಮಾಂಡ್ ಕೃಪಾಪೋಷಿತ ಅಕ್ರಮ’ಗಳಿಗೆ ಕೊನೆ ಎಂಬುದಿಲ್ಲವೇ? ಎಂದು ಜನ ಕೇಳುತ್ತಿದ್ದಾರೆ. ಕೊನೆ ಇದೆ, ಇದ್ದೇ ಇರುತ್ತದೆ.. ಕಾಯಬೇಕಷ್ಟೇ. ವಾಕ್ಯ ಎಂದ ಮೇಲೆ ಪುಲ್ ಸ್ಟಾಪ್ ಇರಲೇಬೇಕು ಎಂದು ಜೆಡಿಎಸ್ ಮಾರ್ಮಿಕವಾಗಿ ಹೇಳಿದೆ.

ಸೂರ್ಯ ಪಶ್ಚಿಮಕ್ಕೆ ವಾಲಿದೊಡನೆ ಕಂಡವರ ಪಕ್ಷಗಳವರ ಮನೆ ಬಾಗಿಲ ಮುಂದೆ ಪರ್ಸಂಟೇಜ್ ಪಟಾಲಂ ಪ್ರತ್ಯಕ್ಷ! ಇಂಥಾ ಕಲುಷಿತ ರಾಜಕಾರಣ ಶೋಭೆಯೇ? ನುಡಿದಂತೆ ನಡೆಯುತ್ತೇವೆ ಎಂದರೆ ಇದೇನಾ? ಜನರ ದುಡ್ಡು, ಇವರದ್ದು ಜಾತ್ರೆ. ಇದೇ ಇವತ್ತಿನ ಕರ್ನಾಟಕದ ಚಿತ್ರಣ. ರಾಜ್ಯದ ಜನರಿಗೆ ಇವರ ಭಂಡಾರವೆಲ್ಲ ಗೊತ್ತಾಗಿದೆ. ಆ ಭಂಡಾರ ಬಿಚ್ಚಿಕೊಂಡ ಕೂಡಲೇ ಬಾಲಸುಟ್ಟ ಬೆಕ್ಕಿನಂತೆ ವಿಲವಿಲನೆ ಒದ್ದಾಡಿದರೆ ಹೇಗೆ? ಅವರ ಫಸಲು, ಅವರವರ ಫಲ ಎಂದು ಡಿಸಿಎಂ ಮೇಲೆ ಜೆಡಿಎಸ್ ಚಾಟಿ ಬೀಸಿದೆ.

ಕರ್ನಾಟಕವನ್ನು ಹೈ ಕಮಾಂಡ್ ಗೆ ಒತ್ತೆ ಇಟ್ಟ ಭೂಪತಿ, ಆಧುನಿಕ ಈಸ್ಟ್ ಇಂಡಿಯಾ ಕಂಪನಿಗಳ ಪೊಲಿಟಿಕಲ್ ಏಜೆಂಟ್, ಕರುನಾಡಿನ ಕರೋಡ್ ಪತಿ, ಬದುಕೆಲ್ಲ ಬ್ರೋಕರೇಜ್ ಮಾಡಿಕೊಂಡೇ ಕೊಳ್ಳೆ ಹೊಡೆದ ವ್ಯಕ್ತಿ, ಈಗ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುವುದೇ? ಅರೆರೆ.. ಇವರ SST, YST ಅಬ್ಬರ ಕಂಡು GSTಯೇ ಬೆಚ್ಚಿದೆ. ಇದೇ ನೋಡಿ ಕರ್ನಾಟಕದ ಮಾದರಿ! ಎಂದು ಜೆಡಿಎಸ್ ಕಿಡಿಕಾರಿದೆ.

ಕಾಂಗ್ರೆಸ್ ಪಕ್ಷವೇ ಪರ್ಸಂಟೇಜ್ ಪಟಾಲಂ. ಕಮೀಷನ್ ಕೈಂಕರ್ಯವೇ ಅದರ ರಾಜಧರ್ಮ. ಲೂಟಿ, ದಂಧೆ, ಅಕ್ರಮವೇ ಅದರ ಗ್ಯಾರಂಟಿ. ಅನ್ಯರಾಜ್ಯಗಳ ಚುನಾವಣೆ ಇವರಿಗೆ ಚಿನ್ನದ ಗಣಿ. ಹೈಕಮಾಂಡ್ ಆಸರೆಯೇ ಅಕ್ಷಯ ಪಾತ್ರೆ.. ಇಂಥವರಿಗೆ ಕುಮಾರಸ್ವಾಮಿಯವರ ಕೂಗು ಕೇಳುವುದೇ? ಇಲಾಖೆಗೊಂದು ಹಿಟಾಚಿ ಇಟ್ಟುಕೊಂಡು 24X7 ಬಾಚುತ್ತಿದ್ದಾರೆ ಎಂದು ಜೆಡಿಎಸ್ ಕೈ ಪಕ್ಷದ ವಿರುದ್ಧ ಆರೋಪ ಮಾಡಿದೆ.

ಸ್ವತಃ ತಾನೇ ಕೊಳೆತು ನಾರುತ್ತಿದೆ. ಆದರೆ, ಪಕ್ಕದ ಮನೆ ಕಂಪೌಡಿನ ಮೇಲೆ ಮರದೆಲೆ ಬಿದ್ದಿದೆ ಎಂದು ಕಾಂಗ್ರೆಸ್ ಅಂಗೈ ಪರಚಿಕೊಳ್ಳುತ್ತಿದೆ. ಪರಚಿಕೊಳ್ಳುವುದರ ಜತೆಗೆ, ಕರ್ನಾಟಕವನ್ನೇ ಪಾಪರ್ ಮಾಡುವುದೇ ಪರ್ಸಂಟೇಜ್ ಪಟಾಲಂ ಹಾಕಿಕೊಂಡಿರುವ ಏಕೈಕ ಗುರಿ. ಅದರ ಪಾಲಿಗೆ ಹೈ ಕಮಾಂಡ್ ಸೇವೆಯೇ ಆನಂದದಾಯಕ ಸೇವೆ! ಕಾಲಕ್ಕೆ ತಕ್ಕ ಕಾಂಗ್ರೆಸ್!! ಎಂದು ಆ ಪಕ್ಷದ ಕಾಲೆಳೆದಿದೆ ಜೆಡಿಎಸ್.

Leave a Reply

Your email address will not be published. Required fields are marked *

Back to top button