Breaking Newsಕರ್ನಾಟಕ ರಾಜಕೀಯ

ಪಕ್ಷದ ಮುಖಂಡರ ಜತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಹತ್ವದ ಸಮಾಲೋಚನೆ

ಲೋಕಸಭೆ ಚುನಾವಣೆ ಬಗ್ಗೆಯೂ ಸಮಾಲೋಚನೆ

ಬರ, ವಿದ್ಯುತ್ ಲೋಡ್ ಶೆಡ್ಡಿಂಗ್, ಕಾವೇರಿ ಸಂಕಷ್ಟದ ಬಗ್ಗೆ ಚರ್ಚೆ

ಮುಂದಿನ ಚುನಾವಣೆಗಳಿಗೆ ಜೆಡಿಎಸ್ ಸಿದ್ಧತೆ | ಸೆ.10ರಂದು ಬೆಂಗಳೂರಿನಲ್ಲಿ ಜೆಡಿಎಸ್ ಬೃಹತ್ ಸಮಾವೇಶ


ಬೆಂಗಳೂರು: ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ಪ್ರಮುಖರ ಸಭೆ ನಡೆಸಿದರಲ್ಲದೆ, ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳು, ಸಂಘಟನೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು.

ಅನಾರೋಗ್ಯದಿಂದ ಚೇತರಿಸಿಕೊಂಡ ನಂತರ ಪಕ್ಷದ ಮೊದಲ ಸಭೆಯಲ್ಲಿ ಪಾಲ್ಗೊಂಡರು ಮಾಜಿ ಮುಖ್ಯಮಂತ್ರಿಗಳು. ಹಾಗೆಯೇ, ಈ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನಿಗಳವರು ಕುಮಾರಸ್ವಾಮಿ ಅವರ ಜೆಪಿ ನಗರ ನಿವಾಸಕ್ಕೆ ಆಗಮಿಸಿದರು.

ಪಕ್ಷದ ಸುದೀರ್ಘ ಸಭೆಯಲ್ಲಿ ಪಾಲ್ಗೊಂಡ ಕುಮಾರಸ್ವಾಮಿ ಅವರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿ, ಮುಖಂಡರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಬಂಡೆಪ್ಪ ಕಾಶೆಂಪೂರ, ಮಾಜಿ ಸಂಸದ ಕುಪೆಂದ್ರ ರೆಡ್ಡಿ, ಹೆಚ್.ಕೆ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲಾ ಹಾಲಿ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು ಹಾಗೂ ಜಿಲ್ಲಾ ಅಧ್ಯಕ್ಷರು ಹಾಜರಿದ್ದ ಈ ಸಭೆಯಲ್ಲಿ ಉಭಯ ನಾಯಕರು ಸಭೆಯಲ್ಲಿ ಕೆಲವಾರು ಗಂಭೀರ ವಿಷಯಗಳನ್ನು ಹಂಚಿಕೊಂಡರು.

ಅಲ್ಲದೆ, ಕಾವೇರಿ ಜಲ ಸಂಕಷ್ಟ, ಬರಗಾಲ ಹಾಗೂ ಅಘೋಷಿತ ಲೋಡ್ ಶೆಡ್ಡಿಂಗ್ ಬಗ್ಗೆಯೂ ಕೂಡ ಸುದೀರ್ಘ ಚರ್ಚೆ ನಡೆಯಿತಲ್ಲದೆ, ಜನಪರ ವಿಷಯಗಳನ್ನು ಇಟ್ಟುಕೊಂಡು ಸರಕಾರದ ವಿರುದ್ಧ ಹೋರಾಟ ರೂಪಿಸಬೇಕು ಎಂದು ಇಬ್ಬರೂ ನಾಯಕರು ಪಕ್ಷದ ಮುಖಂಡರಿಗೆ ಹೋರಾಟದ ದಿಕ್ಸೂಚಿ ನಿಗದಿ ಮಾಡಿದರು.

ಪಕ್ಷ ಬಲಿಷ್ಟವಾಗಿದೆ. ಅದನ್ನು ದುರ್ಬಲಗೊಳಿಸುವ ದುಷ್ಪ್ರಯತ್ನಕ್ಕೆ ಅವಕಾಶ ನೀಡುವುದಿಲ್ಲ. ನಾನು ಬದುಕುವುದರ ಒಳಗಾಗಿ ಈ ಪಕ್ಷ ಅಧಿಕಾರಕ್ಕೆ ಬರುತ್ತದೆ. ಅದನ್ನು ನೋಡಿಯೇ ನೋಡುತ್ತೇನೆ. ಈ ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ಅವಿರತವಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಶಪಥ ಮಾಡಿದರು.

ಸೆ.10ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ:

ಮುಂಬರುವ ಲೋಕಸಭೆ, ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇದೇ ತಿಂಗಳು 10ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಪಕ್ಷದ ಬೃಹತ್ ಸಂಘಟನಾ ಸಮಾವೇಶದ ಬಗ್ಗೆ ಚರ್ಚೆ ನಡೆಸಿದ ಮಾಜಿ ಪ್ರಧಾನಿಗಳು, ಸೋತೆವು ಎಂದು ಸುಮ್ಮನಿದ್ದರೆ ಆಗುವುದಿಲ್ಲ. ಛಲದಿಂದ ಕೆಲಸ ಮಾಡಿದರೆ ಜನರು ಮೆಚ್ಚಿಕೊಳ್ಳುತ್ತಾರೆ.ಎಲ್ಲರೂ ಸೇರಿ ಪಕ್ಷವನ್ನು ಕಟ್ಟೋಣ ಎಂದು ಮುಖಂಡರಿಗೆ ಹುರಿದುಂಬಿಸಿದರು.

ಈ ವಯಸ್ಸಿನಲ್ಲಿಯೂ ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲು ತಯಾರಿದ್ದೇನೆ. ಎಲ್ಲಿಗೆ ಬೇಕಾದರೂ ಬರಲು ಸಿದ್ಧನಿದ್ದೇನೆ. ಜನರ ಪರವಾಗಿ ಹೋರಾಟ ಮಾಡೋಣ ಎಂದರು ಅವರು.

ದೊಡ್ಡ ಪ್ರಮಾಣದಲ್ಲಿ ಕಾವೇರಿ ಹೋರಾಟ:

ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ, ಜಿಟಿ ದೇವೇಗೌಡರು ಹಾಗೂ ಬಂಡೆಪ್ಪ ಕಾಷೆಂಪೂರ ಮತ್ತು ಟಿ.ಎ.ಶರವಣ ಅವರು, ಸಭೆಯಲ್ಲಿ ಕಾವೇರಿ ವಿಚಾರ ಕೂಡ ಚರ್ಚೆಯಾಯಿತು. ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಈಗಾಗಲೇ ಹೋರಾಟ ನಡೆಸಲಾಗಿದೆ. ಮಂಡ್ಯ ಜಿಲ್ಲೆಯ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ರಾಜ್ಯ ಮಟ್ಟಕ್ಕೆ ಈ ಹೋರಾಟವನ್ನು ವಿಸ್ತರಣೆ ಮಾಡಲಾಗುವುದು. ಈ ಸರಕಾರದಿಂದ ರಾಜ್ಯದ ಕಾವೇರಿ ಹಿತ ಕಾಯಲು ಸಾಧ್ಯವಿಲ್ಲ ಎಂದರು.

ದೇವೇಗೌಡರು, ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಎಲ್ಲಾ ಶಾಸಕರು, ಜಿಲ್ಲಾ ಮುಖಂಡರು ಸಭೆ ಸೇರಿದ್ದೆವು. ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟಲು ನಿರ್ಧಾರ ಮಾಡಲಾಯಿತು. ಸೆಪ್ಟೆಂಬರ್ 10ರಂದು ಪ್ರಮುಖ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸಭೆ ಯಶಸ್ವಿ ಮಾಡುವ ಬಗ್ಗೆ ಹಿರಿಯ ನಾಯಕರು ಸೂಚನೆಗಳನ್ನು ನೀಡಿದರು. ನಂತರ ಜಿಟಿಡಿ ನೇತೃತ್ವದಲ್ಲಿ ಮಾಡಿರೋ ಕೋರ್ ಕಮಿಟಿ ರಾಜ್ಯ ಪ್ರವಾಸ ಮಾಡಬೇಕು. ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ತೆರಳಿ ಪ್ರಮುಖರ ಅಭಿಪ್ರಾಯ ಪಡೆಯಲಾಗುವುದು. ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದೆ. ಮುಂದಿನ ತಿಂಗಳು ಅವರೂ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಅಲ್ಲದೆ, ರಾಜ್ಯದಲ್ಲಿನ ರಾಜಕೀಯ ಬೆಳವಣಿಗಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು. ಎಲ್ಲ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲಾಯಿತು. ಜಿಲ್ಲಾವಾರು ಮುಖಂಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಂದರು ನಾಯಕರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

Back to top button