Breaking Newsಸುದ್ದಿ ಸಮಾಚಾರ

ಸೌಜನ್ಯ ಹತ್ಯೆಯ ಆರೋಪಿಗಳ ಪತ್ತೆಹಚ್ಚಲು ಅಣ್ಣಪ್ಪ ಸ್ವಾಮಿಯ ಮೊರೆ..!!


ಕ್ಷೇತ್ರದ ಅಪವಾದ ಕಳೆಯಲು ಅರ್ಚಕರಿಂದ, ಭಕ್ತರಿಂದ ಪ್ರಾರ್ಥನೆ

ನ್ಯಾಯಾಲಯದಲ್ಲಿ ತೀರ್ಮಾನವಾಗದ ಸೌಜನ್ಯ ಹತ್ಯೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡೆಂದು ಮನವಿ

ಧರ್ಮಸ್ಥಳ: ರಾಜ್ಯದ ಗಮನ ಸೆಳೆದಿರುವ ಸೌಜನ್ಯ ಹತ್ಯೆ ಪ್ರಕರಣ 11 ವರ್ಷದ ವಿಚಾರಣೆ ಬಳಿಕವೂ ನ್ಯಾಯಾಲಯದಲ್ಲಿ ತಾರ್ಕಿಕ ಅಂತ್ಯ ಕಂಡಿಲ್ಲ. ಹಾಗಿರುವಾಗ ಕ್ಷೇತ್ರದ ಮೇಲೆ ಅಪಪ್ರಚಾರಗಳು ಹೆಚ್ಚಾಗುತ್ತಿವೆ. ಜಗತ್ತಿಗೆ ತೀರ್ಮಾನ ನೀಡುವ ಕ್ಷೇತ್ರದ ಅಧಿದೇವತೆಗಳು, ಈ ಪ್ರಕರಣಕ್ಕೂ ತಾರ್ಕಿಕ ಅಂತ್ಯ ನೀಡುವಂತೆ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.


ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮೊದಲಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಇಲ್ಲಿ ದೇವಳದ ಅರ್ಚಕರು ಪ್ರಾರ್ಥನೆ ನೆರವೇರಿಸಿದರು. ಬಳಿಕ ಅಣ್ಣಪ್ಪ ಬೆಟ್ಟದ ಮುಂಭಾಗದಲ್ಲಿ ಭಕ್ತರು ಸೇರಿ, ಅಣ್ಣಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು. ಕೊನೆಯಲ್ಲಿ ತೆಂಗಿನಕಾಯಿ ಒಡೆಯಲಾಯಿತು. ಬಳಿಕ ಹರ್ಪಾಡಿಯ ಕನ್ಯಾಕುಮಾರಿ ಬಳಿಯೂ ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀ ಮಂಜುನಾಥ ಸ್ವಾಮಿಯ ದೇವಳದ ಮುಂದೆ ಪ್ರಾರ್ಥನೆ ಸಲ್ಲಿಸಿದ ಕ್ಷೇತ್ರದ ಅರ್ಚಕರು, ಸೌಜನ್ಯ ಹತ್ಯೆ ನಡೆದು 11 ವರ್ಷಗಳಾಗಿವೆ. ಆದರೆ ಇದುವರೆಗೂ ಯಾರು ಅಪರಾಧಿಗಳು ಎನ್ನುವ ಪ್ರಶ್ನೆ ಹಾಗೆಯೇ ಉಳಿದುಕೊಂಡಿದೆ. ಹಾಗಿರುವಾಗ ಈ ಪ್ರಕರಣದ ಅಪರಾಧಿಗಳು ಯಾರು ಎನ್ನುವುದು ಮನವರಿಕೆ ಆಗಬೇಕು. ಅಲ್ಲದೇ, ಕ್ಷೇತ್ರದ ಮೇಲೆ ಆಗುತ್ತಿರುವ ಅಪವಾದ ಮಾಡುವವರಿಗೆ ದೇವರು ಶಿಕ್ಷೆ ನೀಡಬೇಕು ಎಂದು ಕ್ಷೇತ್ರದ ಧರ್ಮದೇವತೆಗಳನ್ನು, ಅಣ್ಣಪ್ಪ ಸ್ವಾಮಿಯನ್ನು ಒಂದೇ ಮನಸ್ಸಿನಿಂದ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಮುಂದುವರಿದು. 11 ವರ್ಷಗಳ ಪರ್ಯಂತ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಸಂದರ್ಭ ಕ್ಷೇತ್ರದ ಹೆಸರು ಬಂದೇ ಇಲ್ಲ. ಆದರೂ ಕ್ಷೇತ್ರದ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣ ಆರೋಪಿತ ವ್ಯಕ್ತಿ ಖುಲಾಸೆ ಆಗಿರುವುದು. ಆದ್ದರಿಂದ ಮಂಜುನಾಥ ಸ್ವಾಮಿ ನ್ಯಾಯ ಕೊಡಿಸಬೇಕು ಎಂದು ಬೇಡಿಕೊಳ್ಳುತ್ತಿದ್ದೇವೆ. ತನಿಖೆಗೆ ಪೂರಕವಾಗಿ ಮಂಜುನಾಥ ಸ್ವಾಮಿ ಪೂರ್ಣಾನುಗ್ರಹ ನೀಡಬೇಕು. ನ್ಯಾಯಾಲಯಕ್ಕೂ ನೈಜ ವಿಷಯ ಮನವರಿಕೆ ಆಗಬೇಕು. ಕ್ಷೇತ್ರದ ಮೇಲೆ ಬರುವಂತಹ ಅಪವಾದಗಳು ದೂರೀಕರಿಸಿ, ಮುಂದಕ್ಕೆ ಕ್ಷೇತ್ರದ ಎಲ್ಲಾ ವಿಷಯಗಳಲ್ಲೂ ಪೂರ್ಣಾನುಗ್ರಹ ನೀಡಬೇಕು ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭ ಮಂಜುನಾಥ ಸ್ವಾಮಿಗೆ, ಅಣ್ಣಪ್ಪ ಸ್ವಾಮಿಗೆ, ನ್ಯಾಯಕ್ಕೆ ಜಯವಾಗಲಿ ಎಂಬ ಘೋಷಣೆ ಮಾಡಲಾಯಿತು.

ನಂತರ ಅಣ್ಣಪ್ಪ ಬೆಟ್ಟದ ಬಳಿ ತೆರಳಿ, ಅಲ್ಲೂ ಪ್ರಾರ್ಥನೆ ಸಲ್ಲಿಸಲಾಯಿತು – ಕ್ಷೇತ್ರದ ಅಧಿದೇವತೆ ಅಣ್ಣಪ್ಪ ಸ್ವಾಮಿಯ ಪಾದತಳಗಳಲ್ಲಿ ಸಾಷ್ಟಾಂಗ ಪ್ರಣಾಮ ಸಲ್ಲಿಸುತ್ತಾ, ಸೌಜನ್ಯ ಕೊಲೆ ಪ್ರಕರಣದಲ್ಲಿ ಕಳೆದ 11 ವರ್ಷಗಳಿಂದ ನ್ಯಾಯಾಲಯದಲ್ಲಿ ತಾರ್ಕಿಕ ಅಂತ್ಯ ಕಂಡಿಲ್ಲ. ಜಗತ್ತಿನ ಯಾವುದೇ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ನೀಡುವವರು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ. ಆದ್ದರಿಂದ ಸೌಜನ್ಯ ಹತ್ಯೆ ಯಾರ ಕಡೆಯಿಂದ ಆಗಿದೆ, ಯಾರು ಮಾಡಿದ್ದಾರೆ ಎನ್ನುವ ವಿಚಾರ ತಿಳಿದು, ಅವರಿಗೆ ಸರಿಯಾದ ಶಿಕ್ಷೆ ಹಾಗೂ ನ್ಯಾಯಾಲಯದಲ್ಲೂ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಪ್ರಾರ್ಥಿಸಿದರು.
ಕ್ಷೇತ್ರದ ಸ್ವಾಮಿಯ ಹೆಸರನ್ನು, ನಿಮ್ಮ ಹೆಸರನ್ನು ಹೇಳಲು ಭಕ್ತರಾದ ನಾವು ಹೆದರುತ್ತೇವೆ. ಅಂತಹ ದಾರ್ಷ್ಟ್ಯ ನಮಗಿಲ್ಲ. ಯಾಕೆಂದರೆ ನಾವೆಲ್ಲ ನಿಮ್ಮ ಮಕ್ಕಳು. ಹೀಗಿದ್ದರೂ, ಕ್ಷೇತ್ರದ ಬಗ್ಗೆ, ವ್ಯವಸ್ಥೆಯ ಬಗ್ಗೆ, ಖಾವಂದರ ಬಗ್ಗೆ ಇಲ್ಲಸಲ್ಲದ ಮಾತು ಕೇಳಿಬರುತ್ತಿದೆ. ಇದಕ್ಕೂ ಒಂದು ಅಂತ್ಯವನ್ನು ನೀವೇ ತೋರಿಸಿಕೊಡಬೇಕು. ಸುಳ್ಳು ಅಪವಾದಗಳ ಮೂಲಕ ಇಡೀ ಜಗತ್ತಿನ ಭಾವನೆಯನ್ನು ಬೇರೆಡೆಗೆ ತಿರುಗಿಸಿ, ಅದಕ್ಕೂ ಪದೇ ಪದೇ ನಿಮ್ಮ ಹೆಸರು ಹೇಳುತ್ತಿರುವುದು ಬೇಸರದ ಸಂಗತಿ. ಹಾಗಿರುವಾಗ ಸಾತ್ವಿಕರಾದ ನಮ್ಮ ಪ್ರಾರ್ಥನೆ ಏನೆಂದರೆ – ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುವವರಿಗೆ ಸಾಮ, ದಾನ, ಬೇಧ, ದಂಡದ ಮೂಲಕ ಸರಿಪಡಿಸಬೇಕು. ಶಿಕ್ಷೆ ಕೊಡುವ ಅವಶ್ಯಕತೆ ಇದ್ದರೆ, ಅದನ್ನೂ ನೀಡುವಂತೆ ಭಕ್ತಿಯಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಇದೇ ಸಂದರ್ಭ ಅಣ್ಣಪ್ಪ ಸ್ವಾಮಿಗೆ, ಮಂಜುನಾಥ ಸ್ವಾಮಿಗೆ, ಧರ್ಮದೇವತೆಗಳಿಗೆ, ವೀರೇಂದ್ರ ಹೆಗ್ಗಡೆ ಅವರಿಗೆ ಜಯಘೋಷ ಹಾಕಲಾಯಿತು.

Leave a Reply

Your email address will not be published. Required fields are marked *

Back to top button