Breaking Newsಕರ್ನಾಟಕ ರಾಜಕೀಯ

ಮೈತ್ರಿಯಿಂದ ರಾಜಕೀಯದಲ್ಲಿ ಸಿದ್ಧಾಂತ ಮುಖ್ಯವಲ್ಲ ಎಂಬ ಸಂದೇಶ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು:”ರಾಜಕಾರಣದಲ್ಲಿ ಸಿದ್ದಾಂತ ಮುಖ್ಯವಲ್ಲ ಎನ್ನುವ ಕೆಟ್ಟ ಸಂದೇಶವನ್ನು ಜೆಡಿಎಸ್- ಬಿಜೆಪಿ ಮೈತ್ರಿ ನೀಡಿದೆ “ಜೆಡಿಎಸ್- ಬಿಜೆಪಿ ಮೈತ್ರಿ ನಂತರ ಪಕ್ಷ ಸೇರುವಂತಹವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜೆಡಿಎಸ್ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಮಂಗಳವಾರ ರಾತ್ರಿ ಮೂರು ಜನ ಮಾಜಿ ಶಾಸಕರ ಜೊತೆ ಮಾತುಕತೆ ನಡೆಸಿದ್ದೇನೆ, ಮುಂದಿನ ದಿನಗಳಲ್ಲಿ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗಲಿದೆ. ನಾವೆಲ್ಲಾ ಜಾತ್ಯಾತೀತ ಸರ್ಕಾರ ಇರಬೇಕು ಎಂದು ಹೋರಾಟ ಮಾಡಿದೆವು. ಈಗ ಸರ್ಕಾರ ಬೀಳಿಸಿದವರ ಜೊತೆಯಲ್ಲೇ ಕೈ ಜೋಡಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

“ಮೈತ್ರಿಯನ್ನು ವಿರೋಧಿಸಿ ಪಕ್ಷ ತೊರೆದು ಬರುತ್ತಿದ್ದಾರೆ. ನಮಗೆ ಮುಖಂಡರಿಗಿಂತ ಕಾರ್ಯಕರ್ತರು ಬಹಳ ಮುಖ್ಯ, ಶಿವಮೊಗ್ಗ, ರಾಮನಗರ, ಬೆಂಗಳೂರು ನಗರ ಹೀಗೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ತಂಡೋಪತಂಡವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಮರ್ಥ್ಯವಿರುವ ಅಭ್ಯರ್ಥಿಗಳೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ” ಎಂದು ಹೇಳಿದರು.

ಆಪರೇಷನ್ ಹಸ್ತ ನಾವೆಂದೂ ಮಾಡುವುದಿಲ್ಲ, ನಮ್ಮದು ಕೋ- ಆಪರೇಷನ್ ಎಂದು ಪದೇ, ಪದೇ ಹೇಳುತ್ತಿದ್ದೇನೆ. ಕಾರ್ಯಕರ್ತರ ಮಟ್ಟದಲ್ಲಿ ಪಕ್ಷ ಸೇರ್ಪಡೆಗೆ ಸೂಚನೆ ನೀಡಿದ್ದೇನೆ ಎಂದರು.

ಮಾಜಿ ಆಶ್ರಯ ಸಮಿತಿಯ ಅಧ್ಯಕ್ಷ ಕೆ.ಎಂ ಹೋಂಬೇಗೌಡ, ಎಪಿಎಂಸಿ ಸದಸ್ಯರಾದ ಟಿ.ಎ.ಮೂರ್ತಿ, ನಿವೃತ್ತ ಪಶುವೈದ್ಯಧಿಕಾರಿ ಡಾ.ರಾಜು, ಸಿಲ್ಕ್ ಮಂದಿರ್ ಮಾಲೀಕರಾದ ತಿಮ್ಮೇಗೌಡ ಅವರು ಸೇರಿದಂತೆ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾವರೆಕೆರೆ, ಸೂಲಿವಾರ, ಬ್ಯಾಲಾಳು, ದೊಣ್ಣೇನಹಳ್ಳಿ, ಕುರುಬರಪಾಳ್ಯ, ಉದ್ದಂಡಹಳ್ಳಿ, ಗೊಲ್ಲಹಳ್ಳಿ ಗ್ರಾಮಗಳ 70ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸೇರ್ಪಡೆಯಾದರು.

Leave a Reply

Your email address will not be published. Required fields are marked *

Back to top button