Breaking Newsಸಚಿವರ ಕಚೇರಿಯಿಂದ

ಬಡವರಿಗೆ ಗ್ಯಾರಂಟಿ ಯೋಜನೆ ಕೊಟ್ಟರೆ ರಾಜ್ಯ ದಿವಾಳಿ ಆಗುತ್ತದೆಯೇ? ಗೃಹಜ್ಯೋತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ

ಕಲಬುರ್ಗಿ: ನಮ್ಮ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಪ್ರಧಾನಮಂತ್ರಿಗಳು ಹೇಳಿದ್ದಾರೆ. ಈ ಸಂದರ್ಭದಲ್ಲಿ ನಾನು ಪ್ರಧಾನಮಂತ್ರಿಗಳಿಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. ಪ್ರಧಾನಮಂತ್ರಿಗಳೇ ನೀವು ದೊಡ್ಡ ಉದ್ಯಮಿದಾರರ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿದ್ದೀರಿ. ಇದರಿಂದ ದೇಶ ದಿವಾಳಿ ಆಗುವುದಿಲ್ಲವೇ?

ರಾಜ್ಯದ ಬಡವರಿಗೆ 10 ಕೆ.ಜಿ ಅಕ್ಕಿ ಕೊಟ್ಟರೆ, ಅವರ ಮನೆಗೆ ಉಚಿತ ವಿದ್ಯುತ್, ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಹಣ, ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ, ನಿರುದ್ಯೋಗಿ ಯುವಕರಿಗೆ ಶಕ್ತಿ ತುಂಬಿದರೆ ರಾಜ್ಯ ದಿವಾಳಿ ಆಗುತ್ತದೆಯೇ?

ದೇವರು ವರವನ್ನೂ ನೀಡುವುದಿಲ್ಲ, ಶಾಪವನ್ನು ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಅದರಂತೆ ಮಲ್ಲಿಕಾರ್ಜುನ ಖರ್ಗೆ ಅವರು ಈ ಕಲ್ಯಾಣ ಕರ್ನಾಟಕ ಭಾಗಕ್ಕೆ 370ಜೆ ಮೂಲಕ ವಿಶೇಷ ಸ್ಥಾನಮಾನ ನೀಡಿ ಈ ಜನರ ಬದುಕಿನಲ್ಲಿ ಬೆಳಕು ತಂದಿದ್ದರು. ಇಂದು ಕಾಂಗ್ರೆಸ್ ಪಕ್ಷ ಗೃಹಜ್ಯೋತಿ ಯೋಜನೆ ಜಾರಿಗೆ ತಂದು ನಿಮ್ಮ ಮನೆಗೆ ಬೆಳಕು ನೀಡಿದೆ.

ನಾನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ಗಾಂಧಿಜಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡ ಬೆಳಗಾವಿಗೆ ಹೋಗಿ ಅಲ್ಲಿ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಈ ಗೃಹಜ್ಯೋತಿ ಯೋಜನೆಯನ್ನು ಘೋಷಣೆ ಮಾಡಿದ್ದೆವು. ಇದು ನಮ್ಮ ಪಕ್ಷದ ಮೊದಲ ಗ್ಯಾರಂಟಿ ಯೋಜನೆಯಾಗಿದ್ದು, ಆಮೂಲಕ ನೋಂದ ಜನರಿಗೆ ಸಹಾಯ ಮಾಡಲು ಸಂಕಲ್ಪ ಮಾಡಿದೆವು.

ಮನುಷ್ಯನಿಗೆ ನಂಬಿಕೆ ಮುಖ್ಯ. ಮಾತು ಕೊಡುವುದು ಮುಖ್ಯ ಅಲ್ಲ. ಕೊಟ್ಟ ಮಾತನ್ನು ಯಾವುದೇ ಸಂದರ್ಭ ಆಗಿದ್ದರೂ ಅದನ್ನು ಉಳಿಸಿಕೊಳ್ಳುವುದು ಮುಖ್ಯ. ಜ.11ರಂದು ನಾವು ರಾಜ್ಯದ ಜನರಿಗೆ ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಘೋ,ಣೆ ಮಾಡಿದೆವು.

ನಂತರ ಪ್ರಿಯಾಂಕಾ ಗಾಂಧಿ ಅವರು ಬೆಂಗಳೂರಿನ ನಾನ ನಾಯಕಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎರಡನೇ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದರು. ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2000 ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದರು. ಆಗ ನಾವು ಈ ಗ್ಯಾರಂಟಿ ಯೋಜನೆಗಳ ಚೆಕ್ ಗೆ ನಾನು ಹಾಗೂ ಸಿದ್ದರಾಮಯ್ಯ ಸಹಿ ಹಾಕಿದ್ದೆವು.

ನಾನು ಹಾಗೂ ಪ್ರಿಯಾಂಕ್ ಖರ್ಗೆ ಅವರು ಸೇರಿ ಈ ಯೋಜನೆಗಳಿಗೆ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಎಂದು ಹೆಸರು ತೀರ್ಮಾನಿಸಿದೆವು.

ದೇಶದ ಪ್ರತಿಯೊಬ್ಬ ನಾಗರೀಕರು ಕರ್ನಾಟಕ ರಾಜ್ಯದಲ್ಲಿ ಜಾರಿಯಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ನೋಡುತ್ತಿದ್ದಾರೆ. ಇತ್ತೀಚೆಗೆ ಸ್ಟಾಲಿನ್ ಹಾಗೂ ಮಮತಾ ಬ್ಯಾನರ್ಜಿ ಅವರು ಬೆಂಗಳೂರಿಗೆ ಬಂದಾಗ, ನಿಮ್ಮ ಯೋಜನೆಗಳನ್ನು ಜಾರಿ ಮಾಡುವಂತೆ ನಮ್ಮ ರಾಜ್ಯದಲ್ಲೂ ಒತ್ತಡ ಹೇರಲಾಗುತ್ತಿದೆ.

ಇದು ಕಾಂಗ್ರೆಸ್ ಪಕ್ಷದ ಶಕ್ತಿ ಹಾಗೂ ಕಾರ್ಯಕ್ರಮ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿ ಮಾಡುವ ಕೆಲಸ ಮಾಡುತ್ತಿದೆ. ನಾವು ನುಡಿದಂತೆ ನಡೆಯುತ್ತಿದ್ದು, ನಿಮ್ಮ ಆಶೀರ್ವಾದವನ್ನು ಬಯಸುತ್ತೇವೆ.

ನಿಮ್ಮ ನಮ್ಮ ಸಂಬಂಧ ಭಕ್ತ ಹಾಗೂ ಭಗವಂತನಿಗೆ ಇರುವ ಸಂಬಂಧ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ನಾವು ಶ್ರಮಿಸುತ್ತಿದ್ದೇವೆ. ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಿಂಗಳು ಕುಟುಂಬಕ್ಕೆ 5 ಸಾವಿರದಂತೆ ವರ್ಷಕ್ಕೆ 60 ಸಾವಿರ ರೂ.ನಷ್ಟು ಆರ್ಥಿಕ ನೆರವು ಸಿಗಲಿದೆ.

ಇಂತಹ ಯೋಜನೆಯನ್ನು ಬಿಜೆಪಿ ಸರ್ಕಾರ ನೀಡಿತ್ತಾ? ಯಡಿಯೂರಪ್ಪ ಅವರು ಒಂದು ಸೈಕಲ್ ಮತ್ತು ಸೀರೆ ಕೊಟ್ಟಿದ್ದು ಬಿಟ್ಟರೆ ಬೇರೆ ಏನಾದರೂ ಬಿಜೆಪಿ ಸರ್ಕಾರದಿಂದ ಅನುಕೂಲವಾಗಿದೆಯಾ? ಬಡವರಿಗಾಗಿ ಜನಪರ ಕಾರ್ಯಕ್ರಮಗಳನ್ನು ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ,

ಈ ಯೋಜನೆಗೆ 1.42 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದು 200 ಯೂನಿಟ್ ವರೆಗೂ ಬಳಸುವ ಕುಟುಂಬ ಸದಸ್ಯರು ವಿದ್ಯುತ್ ಬಿಲ್ ಕಟ್ಟುವಂತಿಲ್ಲ.

ಶುಭಂ ಕರೋತಿ ಕಲ್ಯಾಣಂ ಆರೋಗ್ಯ, ಧನ, ಸಂಪದಂ, ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ!

ಶ್ಲೋಕದ ಅರ್ಥದಂತೆ ನಿಮ್ಮೆಲ್ಲರಿಗೂ ಮಂಗಳವಾಗಲಿ, ಆರೋಗ್ಯ ಸಿಗಲಿ, ಐಶ್ವರ್ಯ ಸಿಗಲಿ, ಕತ್ತಲಿಂದ ಬೆಳಕಿನೆಡೆಗೆ ಸಾಗಲಿ ಎಂದು ಇಲ್ಲಿ ಜ್ಯೋತಿ ಬೆಳಗಿಸಲಾಗಿದೆ.

ಅತ್ಯುತ್ತಮವಾಗಿ ಈ ಕಾರ್ಯಕ್ರಮ ಆಯೋಜಿಸಿರುವ ಎಲ್ಲರಿಗೂ ಅಭಿನಂದನೆಗಳು.

Leave a Reply

Your email address will not be published. Required fields are marked *

Back to top button