Breaking Newsಕರ್ನಾಟಕ ರಾಜಕೀಯ

ದಲಿತ ನಾಯಕರನ್ನು ಕಾಲಕ್ರಮೇಣ ರಾಜಕೀಯವಾಗಿ ಮುಗಿಸಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ ಬಿಜೆಪಿ

ಬೆಂಗಳೂರು: ತಮ್ಮ ರಾಜಕೀಯ ಜೀವನದುದ್ದಗಲಕ್ಕೂ ದಲಿತ ನಾಯಕರನ್ನು ಜೊತೆಗಿರಿಸಿಕೊಂಡು ಅಧಿಕಾರಕ್ಕೇರಿದ ಸಿದ್ದರಾಮಯ್ಯರವರು, ತಾವು ಅಧಿಕಾರಕ್ಕೇರಿದ ನಂತರ ಜೊತೆಗಿರುವ ದಲಿತ ನಾಯಕರನ್ನು ಕಾಲಕ್ರಮೇಣ ರಾಜಕೀಯವಾಗಿ ಮುಗಿಸಿದರು ಎಂದು ಬಿಜೆಪಿ ಕಿಡಿಕಾರಿದೆ.

ಕಾಂಗ್ರೆಸ್ ಪಕ್ಷಕ್ಕೆ ದಲಿತರು ನೆನಪಾಗುವುದು ಚುನಾವಣೆ ಸಮಯದಲ್ಲಿ ಮಾತ್ರ. ಚುನಾವಣೆಯಲ್ಲಿ ಒಮ್ಮೆ ಗೆದ್ದ ನಂತರ ದಲಿತರನ್ನು ಸಂಪೂರ್ಣವಾಗಿ ಮರೆಯುವ ಪರಿಪಾಠವನ್ನು ಕಾಂಗ್ರೆಸ್ ದಶಕಗಳ ಕಾಲದಿಂದ ರೂಢಿಸಿಕೊಂಡು ಬಂದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಟೀಕೆ ಮಾಡಿದೆ .

ಈ ಸಂಬಂಧ ಬಿಜೆಪಿ ಸರಣಿ ಟ್ವೀಟ್‌ ಮಾಡಿದೆ.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕುತಂತ್ರದಿಂದ ಚುನಾವಣೆಯಲ್ಲಿ ಸೋಲಿಸಿದ್ದನ್ನು ಗಮನಿಸಿದರೆ ಸಾಕು, ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮೇಲೆ ಎಷ್ಟರ ಮಟ್ಟಿಗೆ ದ್ವೇಷವಿದೆ ಎಂಬುದು ಸಾಬೀತಾಗುತ್ತದೆ.

ಸಿದ್ದರಾಮಯ್ಯರವರ ಈ ದಲಿತ ವಿರೋಧಿ ರಾಜಕಾರಣಕ್ಕೆ ರಾಜ್ಯದ ಹಲವಾರು ದಲಿತ ನಾಯಕರು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ರಾಜಕಾರಣದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಬೇಕಾಗಿದ್ದವರು, ಸರಿಯಾದ ರಾಜಕೀಯ ಪ್ರಾತಿನಿಧ್ಯವಿಲ್ಲದೆ ಸೊರಗಿದ್ದಾರೆ.

ಸಿದ್ದರಾಮಯ್ಯರವರ ಕಾರಣಕ್ಕೆ, ಮಲ್ಲಿಕಾರ್ಜುನ ಖರ್ಗೆಯವರು ಮನಸ್ಸಿಲ್ಲದಿದ್ದರೂ ದೆಹಲಿಗೆ ವಲಸೆ ಹೋಗಬೇಕಾಯಿತು.

ಆರು ಬಾರಿ ಸಂಸದರಾದ ಕೆ.ಎಚ್. ಮುನಿಯಪ್ಪ ಅವರು ಕೋಲಾರಕ್ಕಷ್ಟೆ ಸೀಮಿತವಾಗಿ, ಸಿದ್ದರಾಮಯ್ಯರವರ ಶಿಷ್ಯರಿಂದ ಸೋಲನ್ನು ಅನುಭವಿಸಬೇಕಾಯಿತು.

ತಮ್ಮ ಬಹುಕಾಲದ ಒಡನಾಡಿ, ಹಿರಿಯ ದಲಿತ ನಾಯಕ ವಿ. ಶ್ರೀನಿವಾಸ್ ಪ್ರಸಾದ್ ಅವರನ್ನು ಅವಮಾನಗೊಳಿಸಿದ್ದು ಬಹಿರಂಗ ಸತ್ಯ.

ಇದೆಲ್ಲದಕ್ಕೂ ಮೀರಿ, ಕೊರಟಗೆರೆಯಲ್ಲಿ 2013ರಲ್ಲಿ ಜಿ. ಪರಮೇಶ್ವರ್ ಅವರನ್ನು ಸೋಲಿಸಿದ್ದೆ ಸಿದ್ದರಾಮಯ್ಯರವರು ಎಂದು ಕಾಂಗ್ರೆಸ್ ಕಾರ್ಯಕರ್ತರೇ ಮಾತನಾಡುತ್ತಾರೆ.

ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿರವರ ಮನೆಗೆ ಬೆಂಕಿ ಇಟ್ಟವರನ್ನು, ತಮ್ಮ ಓಲೈಕೆ ರಾಜಕಾರಣಕ್ಕಾಗಿ ಕಾಪಾಡಿಕೊಂಡು, ಅವರಿಗೆ ಟಿಕೆಟ್ ಅನ್ನು ನೀಡದೆ ದ್ರೋಹ ಬಗೆದರು.

ಚುನಾವಣೆಗೂ ಮುನ್ನ ರಾಜ್ಯದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾದರೆ ತಮಗೇನು ಅಭ್ಯಂತರವಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯರವರು, ಚುನಾವಣೆಯ ನಂತರ ಸಂಪೂರ್ಣ ಉಲ್ಟಾ ಹೊಡೆದಿದ್ದಾರೆ.

ಐದು ವರ್ಷ ಸಿದ್ದರಾಮಯ್ಯರವರೆ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಆಗಾಗ ತಮ್ಮ ಆಪ್ತ ಬಣದ ಸಚಿವರ ಮುಖಾಂತರ ಬಹಿರಂಗ ಹೇಳಿಕೆಗಳನ್ನು ಕೊಡಿಸುವ ಮೂಲಕ ಅವರು ಟಾಂಗ್ ಕೊಡುತ್ತಿರುವುದೇ ಪರಮೇಶ್ವರ್, ಖರ್ಗೆಯವರಿಗೆ.

ಇದಲ್ಲದೇ ದಲಿತ ಸಮುದಾಯಗಳಿಗೆ ಮೀಸಲಿರುವ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅನುದಾನವನ್ನು ಇತರ ಉದ್ದೇಶಗಳಿಗೆ ಬಳಸಿಕೊಂಡಿರುವುದು, ಸಿದ್ದರಾಮಯ್ಯರವರಿಗೆ ದಲಿತರ ಮೇಲಿರುವ ದ್ವೇಷವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.

ದಲಿತ ವಿರೋಧಿ ಸಿದ್ದರಾಮಯ್ಯರವರು ಅಧಿಕಾರದಲ್ಲಿರುವವರೆಗೂ ದಲಿತರು ಕೇವಲ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಆಗಿ ಉಳಿಯಲಿದ್ದಾರೆ ಎಂಬುದು ಕಾಂಗ್ರೆಸ್‌ನ ದಲಿತ ನಾಯಕರುಗಳ ಒಮ್ಮತದ ನಿಲುವು. ಈಗೆದ್ದಿರುವ ಭುಗಿಲು ಕೂಡ ಅದೇ ಕಾರಣಕ್ಕಾಗಿ!

Leave a Reply

Your email address will not be published. Required fields are marked *

Back to top button