Breaking Newsಮುಖ್ಯಮಂತ್ರಿ ನ್ಯೂಸ್

ಬಿಜೆಪಿಯವರಿಗೆ ಭಾರತದ ಬಹುತ್ವದ ಬಗ್ಗೆ ಗೌರವ ಇಲ್ಲ, ಇಂಡಿಯಾದ ಘನತೆಯೂ ಗೊತ್ತಿಲ್ಲ : ಸಿಎಂ ಸಿದ್ದರಾಮಯ್ಯ

ಮೇಕ್ ಇಂಡಿಯಾ-ಸ್ಕಿಲ್ ಇಂಡಿಯಾ ಎಂದವರೇ ಈಗ ಇಂಡಿಯಾ ಹೆಸರಿಗೆ ಬೆಚ್ಚಿ ಬಿದ್ದಿದ್ದಾರೆ

ಬೆಂಗಳೂರು ಸೆ 10: ಬಹುತ್ವ ಭಾರತೀಯ ಸಂಸ್ಕೃತಿಯ ಜೀವಾಳ. ಇದೇ ಭಾರತದ ಮಣ್ಣಿನ ಸತ್ವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಭಾರತದ ಬಹುತ್ವದ ನಾಶ ಎಂದರೆ ಅದು ನಮ್ಮ ಸಂವಿಧಾನದ ನಾಶ. ಸಾವಿರಾರು ವರ್ಷಗಳ ಭಾರತದ ಬಹುತ್ವ ಸಂಸ್ಕೃತಿಯನ್ನು ನಾಶ ಪಡಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕಾಗಿ ಆಕರ್ಷಕ ಪದಗಳನ್ನು, ಘೋಷಣೆಗಳನ್ನು ಕೊಡುತ್ತಿದ್ದಾರೆ. ಇದಕ್ಕೆ ಮರುಳಾದರೆ ಭಾರತದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಬೆಸುಗೆ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ದೇಶದ ಹೆಸರನ್ನೇ ಈಗ ಬದಲಾಯಿಸುವ ಹುನ್ನಾರ ಮಾಡುತ್ತಾ ಡ್ರಾಮಾ ಆಡುತ್ತಿದ್ದಾರೆ. ತನ್ನ ಕಾರ್ಯಕ್ರಮಗಳಿಗೆ ಮೇಕ್ ಇನ್ ಇಂಡಿಯಾ , ಸ್ಕಿಲ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ ಅಂತೆಲ್ಲಾ ಹೆಸರಿಟ್ಟಿದ್ದ ಬಿಜೆಪಿ, ಕೇಂದ್ರ ಸರ್ಕಾರವೇ ಈಗ “INDIA” ಹೆಸರಿಗೆ ಬೆಚ್ಚಿ ಬಿದ್ದು ದೇಶದ ಹೆಸರು “ಭಾರತ” ಎಂದು ಹೊಸದಾಗಿ ಹೇಳಲು ಹೊರಟಿದೆ. “ನಾವು ಭಾರತ್ ಜೋಡೋ ನಡೆಸಿದವರು”. ನಮಗೆ ಭಾರತ-ಇಂಡಿಯಾ ಬಗ್ಗೆ ಪಾಠ ಹೇಳುವ ಮೂರ್ಖತನಕ್ಕೆ ಬಿಜೆಪಿ ಪರಿವಾರ ಮುಂದಾಗಿದೆ. ಇವರಿಗೆ ಭಾರತದ ಬಗ್ಗೆಯೂ ಗೌರವ ಇಲ್ಲ. ಇಂಡಿಯಾದ ಘನತೆಯೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿಗಳು ಟೀಕಿಸಿದರು.

ಭಾರತೀತ ಬಹುತ್ವ ಸಂಸ್ಕೃತಿ ಕಾಂಗ್ರೆಸ್ ಕೈಯಲ್ಲಿ ಸುಭದ್ರವಾಗಿದೆ. ಭಾರತೀಯ ಸಂವಿಧಾನ ನಮ್ಮ ಕೈಯಲ್ಲಿ ಸುರಕ್ಷಿತವಾಗಿದೆ. ಯಾರು ಎಷ್ಟೆ ಹುನ್ನಾರ, ಪಿತೂರಿ ರಾಜಕಾರಣ ನಡೆಸಿದರೂ ನಾವು ಬಹುತ್ವದ ಭಾರತವನ್ನು, ಈ ಮಣ್ಣಿನ ಸೌಹಾರ್ದ ಪರಂಪರೆಯನ್ನು, ಜಾತ್ಯತೀತ ಸಂಸ್ಕೃತಿಯನ್ನು, ಭಾರತೀಯ ಸಂವಿಧಾನವನ್ನು ಕಾಪಾಡಿಕೊಳ್ಳುತ್ತೇವೆ. ಭಾರತೀಯರು ಭಯಮುಕ್ತರಾಗಿ ಅಭಿವೃದ್ಧಿ ಭಾರತವನ್ನು ಮುನ್ನಡೆಸಲು ಸನ್ನದ್ಧರಾಗಿ ಎಂದು ಕರೆ ನೀಡಿದರು.

ಅರಮನೆ ಮೈದಾನದಲ್ಲಿ ನಡೆದ ರಾಜ್ಯಸಭಾ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕಾರಣಿ ಸದಸ್ಯರಾದ ಡಾ.ಸೈಯದ್ ನಾಸಿರ್ ಹುಸೇನ್ ಅವರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ಬಿಹಾರ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಶಕೀಲ್ ಅಹಮದ್, ಮಹಾರಾಷ್ಡ್ರ ಕಾಂಗ್ರೆಸ್ ಮುಖಂಡರಾದ ಬಾಬಾ ಸಿದ್ದಿಕಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ನಸೀರ್ ಅಹಮದ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಮಾಜಿ ಸಚಿವ ತನ್ವೀರ್ ಸೇಠ್, ಬೈರತಿ ಸುರೇಶ್, ರಹೀಂಖಾನ್ ಶಾಸಕರುಗಳಾದ ರಿಜ್ವಾನ್ ಅರ್ಷದ್, ಅಬ್ದುಲ್ ಜಬ್ಬಾರ್, ಹ್ಯಾರಿಸ್, ಎ.ಸಿ.ಶ್ರೀನಿವಾಸ್, ರಾಜು ಸೇಠ್, ಖನಿಜಾ ಫಾತಿಮಾ ಹಾಗೂ ಪಕ್ಷದ ಮುಖಂಡರುಗಳಾದ ನಾಸಿರ್ ಹುಸೇನ್, ರಹಮಾನ್ ಖಾನ್ ಮತ್ತು ಯುವ ಕಾಂಗ್ರೆಸ್ ಮುಖಂಡರಾದ ಮೊಹಮದ್ ನಲಪಾಡ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button