Breaking Newsಮುಖ್ಯಮಂತ್ರಿ ನ್ಯೂಸ್

ವಿದ್ಯಾರ್ಥಿನಿಯ ಅಕ್ಕರೆಯ ಸಲಹೆಗೆ ಖುಷಿಯಿಂದ ಉತ್ತರ ನೀಡಿದ ಮುಖ್ಯಮಂತ್ರಿ|ಧಾರವಾಡ ವಿದ್ಯಾರ್ಥಿನಿ ಭೇಟಿ ಮಾಡಿದ ಸಿ ಎಂ ಸಿದ್ದರಾಮಯ್ಯ

ಬೆಂಗಳೂರು: ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮೊಟ್ಟೆಯ ಕುರಿತು ಶಾಲಾ ವಿದ್ಯಾರ್ಥಿನಿಯೊಬ್ಬಳು ಬರೆದ ಪತ್ರಕ್ಕೆ ಉತ್ತರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿದ್ಯಾರ್ಥಿನಿ ನೀಡಿರುವ ಸಲಹೆಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಂದು ಧಾರವಾಡಕ್ಕೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿನಿಯನ್ನೂ ಭೇಟಿ ಮಾಡಿದರು.

ಈ ಸಂಬಂಧ ಅವರು ಸಂತಸವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನಾಡಿನ ಪ್ರತಿ ವಿದ್ಯಾರ್ಥಿಗೂ ಪೌಷ್ಟಿಕ ಆಹಾರ ದೊರಕಬೇಕು, ಯಾರೊಬ್ಬರೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಸದಾಶಯದೊಂದಿಗೆ ಈ ಮೊದಲು 1 ರಿಂದ 8ನೇ ತರಗತಿಯ ವರೆಗಿನ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಮೊಟ್ಟೆಯನ್ನು ನಮ್ಮ ಸರ್ಕಾರವು 9 ಮತ್ತು 10ನೇ ತರಗತಿಗೂ ವಿಸ್ತರಿಸಿದೆ. ನಮ್ಮ ಈ ವಿದ್ಯಾರ್ಥಿಸ್ನೇಹಿ ನಿರ್ಧಾರದ ಬಗ್ಗೆ ಆಶಾ ನೆಹರು ಪಾಟೀಲ್ ಎಂಬ ಪುಟ್ಟ ಬಾಲಕಿಯೊಬ್ಬಳು ನನಗೆ ಪತ್ರ ಬರೆದು ತನ್ನ ಸಂತಸ ಹಂಚಿಕೊಂಡಿದ್ದಾಳೆ ಮಾತ್ರವಲ್ಲ, ಇಂತಹ ಕಾರ್ಯಕ್ರಮಗಳನ್ನು ನೀಡುತ್ತಿರುವ ತಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಸಲಹೆ ನೀಡಿದ್ದಾಳೆ.

ಪುಟ್ಟ ಬಾಲಕಿಯ ಪತ್ರವು ಈ ಯೋಜನೆಯನ್ನು ರೂಪಿಸಿ ಜಾರಿಗೊಳಿಸಿದ ನನ್ನ ಉದ್ದೇಶವನ್ನು ಸಾರ್ಥಕವಾಗಿಸಿತು. ಇಂಥ ಮುಗ್ಧ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವುದು ನಮ್ಮ‌ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಶಾಂತಿ, ಸೌಹಾರ್ದತೆಯ ಸಮೃದ್ಧ ಕರ್ನಾಟಕ ನಿರ್ಮಾಣದ ನನ್ನ ಸಂಕಲ್ಪಕ್ಕೆ ಈ ದಿನ ಇನ್ನಷ್ಟು ಬಲ ಬಂದಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿನಿ ಭೇಟಿ ಮಾಡಿದ ಸಿ ಎಂ
ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ( ಮೊಟ್ಟೆ ) ನೀಡುವುದೂ ಸೇರಿದಂತೆ ರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಪತ್ರ ಬರೆದಿದ್ದ ಧಾರವಾಡ ಜಿಲ್ಲೆ ಕುಂದಗೋಳದ ಆಶಾ ನೆಹರು ಪಾಟೀಲ್ ಎಂಬ ವಿದ್ಯಾರ್ಥಿನಿಯನ್ನು ಇಂದು ಮುಖ್ಯಮಂತ್ರಿ ಭೇಟಿಯಾಗಿ ಮಾತನಾಡಿದರು.

ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳು, ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳ ಮೂಲಕ ನಾಡಿನ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸ್ವಾವಲಂಬಿ ಬದುಕಿನ ಕನಸಿಗೆ ಬೆಂಬಲವಾಗಿ ನಿಂತಿದೆ. ನಮ್ಮ ಈ ಯೋಜನೆಗಳ ಫಲಾನುಭವಿಯಾದ ಪುಟ್ಟ ಹುಡುಗಿಯೊಬ್ಬಳು ನನ್ನೊಂದಿಗೆ ಪತ್ರದ ಮೂಲಕ ತನ್ನ ಸಂತಸ ಹಂಚಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಳು. ಪತ್ರ ಓದಿದಾಗಿಂದ ಆ ಮಗುವನ್ನು ಒಮ್ಮೆ ಭೇಟಿಯಾಗಬೇಕೆಂದು ಬಯಸಿದ್ದೆ, ಅದು ಇಂದು ಸಾಧ್ಯವಾಯಿತು ಎಂದು ಸಿ ಎಂ ಹೇಳಿದ್ದಾರೆ.

ಇಂತಹ ಮುಗ್ಧ ಮಕ್ಕಳ ಭವಿಷ್ಯದ ಕನಸುಗಳು ನಮ್ಮ ಸರ್ಕಾರದ ಕೈಗಳಲ್ಲಿ ಸುರಕ್ಷಿತವಾಗಿದೆ. ಈ ಮಕ್ಕಳ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯವೆಂದು ಭಾವಿಸಿ, ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ ಎಂದು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

Back to top button