Breaking Newsಕರ್ನಾಟಕ ರಾಜಕೀಯ

ಜಾತ್ಯತೀತ ಜನತಾದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ‘ರೈತ ಸಾಂತ್ವನ ಯಾತ್ರೆ’ ಕೈಗೊಳ್ಳುವುದನ್ನು ಸ್ವಾಗತಿಸುತ್ತೇನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜಾತ್ಯತೀತ ಜನತಾ ದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ‘ರೈತ ಸಾಂತ್ವನ ಯಾತ್ರೆ’ ಕೈಗೊಳ್ಳುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬೇಕಾದ ಕೆಲಸ. ಈ ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಸಿದ್ದರಾಮಯ್ಯ ಟ್ವಿಟರ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ರೈತ ಸಾಂತ್ವನ ಯಾತ್ರೆಯ ನಂತರ ತಮ್ಮ ಅನುಭವವನ್ನು ರಾಜ್ಯ ಸರ್ಕಾರದ ಜೊತೆಯಲ್ಲಿ ಮಾತ್ರವಲ್ಲ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ಹಂಚಿಕೊಂಡರೆ ರಾಜ್ಯಕ್ಕೆ ಅನುಕೂಲವಾಗಬಹುದು. ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬರಪರಿಹಾರದ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಾಜ್ಯಕ್ಕೆ ಕೆಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿವರ ಖಂಡಿತ ತಿಳಿದಿದೆ ಎಂದು ಭಾವಿಸುವೆ.

ಹೊಸ ಬೆಳವಣಿಗೆಯಲ್ಲಿ ಸನ್ಮಾನ್ಯ ಹೆಚ್.ಡಿ.ಕುಮಾರಸ್ವಾಮಿ ಅವರು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಜೊತೆ ತಮ್ಮ ಪಕ್ಷದ ಮೈತ್ರಿಗೆ ಮುಂದಾಗಿದ್ದಾರೆ. ರಾಜ್ಯದ ಬಿಜೆಪಿ ನಾಯಕರನ್ನು ದೂರ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಕುಟುಂಬದ ಸದಸ್ಯರ ಜೊತೆ ಆತ್ಮೀಯವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಸೌಹಾರ್ದ ಸಂಬಂಧವನ್ನು ಬಳಸಿಕೊಂಡು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಟ್ಟರೆ ಕನ್ನಡಿಗರು ಋಣಿಯಾಗಿರುತ್ತಾರೆ.

ರಾಜ್ಯದ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಒಟ್ಟು ರೂ.33,710 ಕೋಟಿ ಮೌಲ್ಯದ ಬೆಳೆಹಾನಿಯಾಗಿದೆ. ಕೇಂದ್ರದಿಂದ ರೂ.17,901 ಕೋಟಿ ಪರಿಹಾರಕ್ಕೆ ಮನವಿ ನೀಡಲಾಗಿದೆ. ರಾಜ್ಯಕ್ಕೆ ಕೇಂದ್ರದ ಬರ ಅಧ್ಯಯನ ತಂಡ ಆಗಮಿಸಿದ್ದ ಸಂದರ್ಭದಲ್ಲಿ ಹಸಿರು ಬರವೂ ಸೇರಿದಂತೆ ಬರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಹೀಗಿದ್ದರೂ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆಯೂ ಇಲ್ಲ, ಅನುದಾನವೂ ಇಲ್ಲ.

ಬರಪರಿಹಾರಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಮನವಿ ಮಾಡಲು ನಮ್ಮ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲು ಸಿದ್ಧ ಇದೆ. ತಮ್ಮದೇ ಪಕ್ಷಕ್ಕೆ ಸೇರಿರುವ ಪ್ರಧಾನಮಂತ್ರಿಯವರನ್ನು ಭೇಟಿ ಮಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಲ್ಲಿ ಇಲ್ಲ, ಕೇಂದ್ರದ ಬಿಜೆಪಿ ನಾಯಕರು ಕೂಡಾ ರಾಜ್ಯದ ಬಿಜೆಪಿ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈ ವಿಷಯದಲ್ಲಿ ಸನ್ಮಾನ್ಯ ಹೆಚ್.ಡಿ.ದೇವೇಗೌಡರು ಮತ್ತು ಅವರ ಪಕ್ಷ ಹೆಚ್ಚಿನ ಮುತುವರ್ಜಿ ವಹಿಸಿದರೆ ಇದು ಸಾಧ್ಯವಾಗಬಹುದು ಎಂದಿದ್ದಾರೆ.

    Leave a Reply

    Your email address will not be published. Required fields are marked *

    Back to top button