Breaking Newsಕರ್ನಾಟಕ ರಾಜಕೀಯ

ಬಿಬಿಎಂಪಿ ಪ್ರಯೋಗಾಲಯದಲ್ಲಿ ಬೆಂಕಿ ಅವಘಡ | ಟ್ವೀಟ್‌ ಮಾಡಿ ಮುಜುಗರಕ್ಕೆ ಒಳಗಾದ ಕಾಂಗ್ರೆಸ್‌ | ಕಾಂಗ್ರೆಸ್‌ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಬಿಬಿಎಂಪಿ ಮುಖ್ಯ ಕಚೇರಿ ಆವರಣದಲ್ಲಿ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರ ಬಗ್ಗೆ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ಈಗ ಮುಜುಗರಕ್ಕೆ ಒಳಗಾಗಿದೆ.

ಬಿಬಿಎಂಪಿ ಬೆಂಕಿ ಹಿಂದೆ ಬಿಜೆಪಿ ಷಡ್ಯಂತ್ರವೆಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಈ ಟ್ವೀಟ್ ಹಿಂಪಡೆಯುವುದಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಹೇಳಿದ್ದಾರೆ.

“ನಿನ್ನೆ ಮಾಡಿದ್ದ ಟ್ವೀಟ್ ಅನ್ನು ಹಿಂದೆ ಪಡೆದಿದ್ದೇವೆ. ಆತುರದಲ್ಲಿ ಹುಡುಗರು ಏನೋ ಹಾಗೇ ಟ್ವೀಟ್ ಮಾಡಿದ್ದಾರೆ. ವಾಪಸ್ ತೆಗೆದುಕೊಳ್ಳಲು ಹೇಳಿದ್ದೇನೆʼ ಎಂದು ಡಿ ಕೆ ಶಿವಕುಮಾರ್‌ ತಿಳಿಸಿದ್ದಾರೆ. ನಾನು ಯಾರ ಮೇಲೂ ಆರೋಪ ಮಾಡಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆʼ ಎಂದಿದ್ದಾರೆ.

ಬೆಂಕಿ ಸಂಬಂಧ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಸಹ ಟೀಕೆ ಮಾಡಿದೆ. ಕಾಂಗ್ರೆಸ್‌ ಆರೋಪಕ್ಕೆ ಶಾಸಕ ಬಸನಗೌಡ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ. “ಬೆಂಕಿ ಹಚ್ಚುವ ಕೆಲಸ ನಿಮ್ಮದೇ ಇರಬೇಕು? ನೀವೇ ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚಿರಬೇಕುʼ ಎಂದು ಹರಿಹಾಯ್ದಿದ್ದಾರೆ.

ನಮ್ಮ ಕೈವಾಡ ಇಲ್ಲ:
ಬೆಂಕಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್‌ ರಾಜ್‌ ” ಅವಘಡದ ಹಿಂದೆ ನೌಕರರ ಕೈವಾಡವಿದೆ ಎಂಬ ಗುಲ್ಲು ಹರಿದಾಡ್ತಿದೆ. ನಮ್ಮ ನೌಕರರ ಕೈವಾಡವಿಲ್ಲ, ಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ. ಬೆಂಕಿ ಅವಘಡಕ್ಕೆ ರಾಜಕೀಯ ಬಣ್ಣ ಬಳಿಯುವ ಹುನ್ನಾರ ನಡೀತಿದೆ. ನೌಕರರನ್ನು ಟಾರ್ಗೆಟ್‌ ಮಾಡುವ ಪ್ರಯತ್ನಗಳಾದರೆ ಕರ್ತವ್ಯಕ್ಕೆ ಗೈರಾಗುತ್ತೇವೆ. ಸೋಮವಾರ ಕರ್ತವ್ಯಕ್ಕೆ ಗೈರಾಗಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತೆ. ಇಲ್ಲಸಲ್ಲದ ಆರೋಪ ಮಾಡಿದ್ರೆ ಬಿಬಿಎಂಪಿಯನ್ನೇ ಬಂದ್‌ ಮಾಡುತ್ತೇವೆʼ ಎಂದಿದ್ದಾರೆ.

ಪರೀಕ್ಷೆ ವೇಳೆ ಹೊತ್ತಿಕೊಂಡ ಬೆಂಕಿ:
ಕೆಮಿಕಲ್‌ ಪರೀಕ್ಷೆ ನಡೆಸುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದೆ. 9 ಜನರಿಗೆ ಗಾಯವಾಗಿದೆ. ಎಫ್‌ಎಸ್‌ಎಲ್‌ ಅಧಿಕಾರಿಗಳು ಮಾದರಿ ಸಂಗ್ರಹಿಸಿದ್ದಾರೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆʼ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್‌ ಗೌಡ ಹೇಳಿದ್ದಾರೆ.

ʼಸಂಜೆ 4 ಗಂಟೆ ಸಮಯದಲ್ಲಿ ಕಾಮಗಾರಿ ಗುಣಮಟ್ಟ ಪರೀಕ್ಷೆ ಮಾಡ್ತಿದ್ವಿ. ಟಾರ್‌ ನಲ್ಲಿ ಇರುವ ಬಿಟಮಿನ್‌ ಕಂಟೆಂಟ್‌ ಪರೀಕ್ಷೆ ಮಾಡಲಾಗುತ್ತಿತ್ತುʼ ಎಂದು ಬಿಬಿಎಂಪಿ ಎಂಜಿನಿಯರ್ ಆನಂದ್‌ ಮಾಹಿತಿ ನೀಡಿದ್ದಾರೆ‌ .

ಬಿಬಿಎಂಪಿ ಪ್ರಯೋಗಾಲಯ ಕಟ್ಟದಲ್ಲಿ ಪ್ರಕರಣ ಕುರಿತು ತಾಂತ್ರಿಕ ವಿಚಾರಣೆಗೆ ಆದೇಶ ಮಾಡಲಾಗಿದೆ. ಅವಘಡದ ಕಾರಣಕ್ಕಾಗಿ ಆಂತರಿಕ ತಾಂತ್ರಿಕ ವಿಚಾರಣೆ ಮಾಡಲಾಗುತ್ತದೆ. ಪಾಲಿಕೆ ಮುಖ್ಯ ಇಂಜಿನಿಯರ್ ಬಿ.ಎಸ್ ಪ್ರಹ್ಲಾದ್‌ ಅವರಿಗೆ ಹೊಣೆ ನೀಡಲಾಗಿದೆ. ಆ. 31ರೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button