Breaking Newsನಮ್ಮ ಶಾಸಕರು

ಅಧಿಕಾರಿಗಳ ವಿರುದ್ಧ ಪತ್ರ ಬರೆದ ಬಸವರಾಜ ರಾಯರೆಡ್ಡಿ | ಅಧಿಕಾರಿಗಳು ಮಾತು ಕೇಳ್ತಿಲ್ಲ, ಫೋನ್‌ ರಿಸೀವ್‌ ಮಾಡ್ತಿಲ್ಲ

=======================
ಕೊಪ್ಪಳ : ಸಚಿವರು ಹಾಗೂ ಶಾಸಕರು ತಮಗೆ ಸ್ಪಂದಿಸುತ್ತಿಲ್ಲ ಎಂದು ಪತ್ರ ಬರೆದು ಸುದ್ದಿಯಾಗಿದ್ದ ಶಾಸಕ ಬಸವರಾಜ ರಾಯರೆಡ್ಡಿ ಅವರು ಇದೀಗ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸುದ್ದಿಯಲ್ಲಿದ್ದಾರೆ.

ಅಧಿಕಾರಿಗಳು ಮಾತು ಕೇಳ್ತಿಲ್ಲ, ಫೋನ್‌ ರಿಸೀವ್‌ ಮಾಡ್ತಿಲ್ಲ, ನೀವೇ ಬನ್ನಿ ನೀವು ಬಂದು ಸಭೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಅಳಲು ತೋಡಿಕೊಂಡಿದ್ದಾರೆ.

‘ಕಲ್ಯಾಣ ಕರ್ನಾಟಕ’ ಭಾಗದಲ್ಲಿ ರೈತರು ತೀವ್ರ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದು, ಈ ಕುರಿತು ನಿಮ್ಮ ಅಧ್ಯಕ್ಷತೆಯಲ್ಲಿ ಕಲಬುರಗಿಯಲ್ಲಿ ತುರ್ತು ಸಭೆ ನಡೆಸಿ ಎಂದು ಸಿದ್ದರಾಮಯ್ಯ ಅವರಿಗೆ ಆಗ್ರಹ ಮಾಡಿದ್ದಾರೆ.

ಕಳೆದೆ ಎರಡು ತಿಂಗಳಿಂದ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರ ಬೆಳೆ ಒಣಗಲಾರಂಭಿಸಿವೆ. ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಸುಮಾರು 100ಕ್ಕೂ ಹೆಚ್ಚು ವಿದ್ಯುತ್‌ ಪರಿವರ್ತಕ ಸುಟ್ಟು ಹೋಗಿದ್ದು ಕಂಡು ಬಂದಿದೆ. ಇವುಗಳನ್ನು ದುರಸ್ತಿ ಕಾರ್ಯ ಆಗಿಲ್ಲ. ಗುಣಮಟ್ಟದ ವಿದ್ಯುತ್‌ ಸಹ ಪೂರೈಕೆಯಾಗುತ್ತಿಲ್ಲ. ಈ ಕುರಿತು ಜೆಸ್ಕಾಂನ ಕಲಬುರಗಿ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಕರೆ ಸ್ವೀಕರಿಸುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಅಸಹಾಯಕರಾಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ತಾವೇ ಕಲಬುರಗಿಯಲ್ಲಿ ಜೆಸ್ಕಾಂ ಅಧಿಕಾರಿಗಳ ಸಭೆಯನ್ನು ತುರ್ತಾಗಿ ಕರೆಯಬೇಕು. ಈ ಗಂಭೀರ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗಬೇಕು. ವಿದ್ಯುತ್‌ ಇಲಾಖೆಯ ವ್ಯವಸ್ಥಾಪಕರನ್ನು, ಜೆಸ್ಕಾಂ ಮುಖ್ಯ ಅಧಿಕಾರಿಗಳನ್ನು, ಕೆಪಿಟಿಸಿಎಲ್‌ ಅಧಿಕಾರಿಗಳನ್ನು ಹಾಗೂ ಇಂಧನ ಸಚಿವರನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು, ಸವಿಸ್ತಾರವಾಗಿ ಚರ್ಚಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಯಲಬುರ್ಗಾ ಮತ್ತು ಕುಕನೂರ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

Back to top button