Breaking Newsಕರ್ನಾಟಕ ರಾಜಕೀಯ

ಇನ್ನು ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಬೀಳುತ್ತೆ: ಭವಿಷ್ಯ ನುಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ

ವಿಜಯಪುರ: ವೈವಿಧ್ಯಮ ಟೀಕೆ, ಸ್ವಪಕ್ಷೀಯರ ವಿರುದ್ಧವೇ ಹರಿಹಾಯವುದಕ್ಕೆ ಹೆಸರಾಗಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಇದೀಗ ರಾಜ್ಯ ಸರ್ಕಾರ ಆರು ತಿಂಗಳಲ್ಲಿ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮೂರು ತಿಂಗಳ ಹಿಂದೆ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಆರು ತಿಂಗಳಲ್ಲಿ ಬಿದ್ದು ಹೋಗಲಿದೆ ಎಂದು ವಿಜಯಪುರದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಔತಣಕೂಟದಲ್ಲಿ ಹೇಳಿದ್ದಾರೆ.

ಆರು ತಿಂಗಳಲ್ಲಿ ಸರ್ಕಾರ ಬೀಳುತ್ತೆ, ಅಲ್ಲಿಯವರೆಗೆ ಸಮಾಧಾನದಿಂದ ಇರಿ ಎಂದು ಕಾರ್ಯಕರ್ತರಿಗೆ ಹೇಳಿದ್ಧಾರೆ. ಈ ಹೇಳಿಕೆ ಮತ್ತೊಂದು ಆಪರೇಷನ್‌ ಕಮಲದ ಸುಳಿವೇ ಎಂದು ಹಲವರು ಕೇಳುವಂತಾಗಿದೆ.

ಹಣ ಇಲ್ಲ, ಅನುದಾನ ಕೇಳಬೇಡಿ ಎಂದು ಕಾಂಗ್ರೆಸ್‌ ಶಾಸಕರೇ ಹೇಳುತ್ತಾರೆ. ಕಾಂಗ್ರೆಸ್‌ ಶಾಸಕರೇ ಅಳುತ್ತಿದ್ದಾರೆ. ಇನ್ನು ವಿರೋಧ ಪಕ್ಷದ ನಮಗೆ ಎಲ್ಲಿಂದ ಅನುದಾನ ಕೊಡುತ್ತಾರೆ. ನೀವು ಒಂದು ವರ್ಷ ರೆಸ್ಟ್ ಮಾಡಿ. 6-7 ತಿಂಗಳು ಕಷ್ಟ ಇದೆ. ನಂತರ ನಮ್ಮ ಸರಕಾರ ಬರುತ್ತೆ ಮತ್ತೆ ಅನುದಾನ ಸಿಗುತ್ತೆ ಹೇಳಿದ್ದಾರೆ.

ಯಾರೇ ಏನೇ ಭವಿಷ್ಯ ಹೇಳಿದರೂ ಮತ್ತೆ ದೇಶದ ಪ್ರಧಾನಿ ನರೇಂದ್ರ ಮೋದಿ ಆಗುತ್ತಾರೆ. ವಿಜಯಪುರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜನಕ್ಕೆ ಈ ಸರ್ಕಾರದ ಬಗ್ಗೆ ಸಾಕಾಗಿದೆ:
ಈ ಹಿಂದೆ ಎಚ್‌ಡಿಕೆ ಸರ್ಕಾರ ಬಿದ್ದಾಗಲೂ ಅವರು ನಂಬಿರಲಿಲ್ಲ. ಯತ್ನಾಳ್‌ ಕೂಡ ಅದೇ ಅರ್ಥದಲ್ಲಿ ಹೇಳಿರಬೇಕು ಅನಿಸುತ್ತದೆ. ಯತ್ನಾಳ್‌ 8 ತಿಂಗಳು ಟೈಂ ಯಾಕೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಸಂಪುಟ ಸಭೆಯಲ್ಲೂ ಕೂಡ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಿದ್ದಾರೆ. ಜನಕ್ಕೆ ಈ ಸರ್ಕಾರದ ಬಗ್ಗೆ ಸಾಕಾಗಿದೆ ಎಂದು ಮಾಜಿ ಸಚಿವ ಆರ್.‌ ಅಶೋಕ್ ಹೇಳಿದ್ದಾರೆ.

ಯತ್ನಾಳ್‌ ಹೇಳಿಕೆಗೆ ಶರಣಪ್ರಕಾಶ್‌ ತಿರುಗೇಟು:
ಯತ್ನಾಳ್‌ ಅವರು ಹಗಲುಗನಸು ಕಾಣ್ತಿದ್ದಾರೆ ಅನ್ಸುತ್ತೆ ಎಂದು ಸಚಿವ ಶರಣಪ್ರಕಾಶ್‌ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಸಹ ಅಸಂಬಂಧ ಹೇಳಿಕೆ ನೀಡ್ತಿದ್ದಾರೆ. ಈ ಹಿಂದೆ ಯಾವ ರೀತಿ ಆಡಳಿತ ನಡೆದಿದೆ ಅನ್ನೊದು ಜನರಿಗೆ ಗೊತ್ತಿದೆ. ಆಗ ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಆಗಲಿಲ್ಲ. ಸರ್ಕಾರ ಹೋಯ್ತು ಅನ್ನೋ ಹತಾಶೆಯಲ್ಲಿದ್ದಾರೆ ಎಂದು ಕಿಡಿ ಕಾರಿದ್ದಾರೆ.

Leave a Reply

Your email address will not be published. Required fields are marked *

Back to top button