Breaking Newsಕರ್ನಾಟಕ ರಾಜಕೀಯ

ರದ್ದಾಗಿರುವ ಹುದ್ದೆಗಳಿಗೆ ಬಡ್ತಿ ಅಕ್ರಮದಲ್ಲಿ ಸಚಿವರ ಪಾಲೆಷ್ಟು?: ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೇ ರದ್ದುಗೊಂಡಿದ್ದ ನಿಲಯ ಪಾಲಕರ (ಹಾಸ್ಟೆಲ್‌ ವಾರ್ಡನ್‌) ಹುದ್ದೆಗಳನ್ನು ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆಯದೆ ಮರು ಸೃಜಿಸಿ ತರಾತುರಿಯಲ್ಲಿ 312 ನಿಲಯ ಮೇಲ್ವಿಚಾರಕರಿಗೆ ಬಡ್ತಿ ನೀಡಲಾಗಿದೆ ಎಂದರೆ ಏನರ್ಥ? ಸಚಿವರಿಗೆ ಒಂದೊಂದು ಹುದ್ದೆಯಿಂದ ಎಷ್ಟು ಕಮಿಷನ್ ಸಂದಾಯವಾಗಿದೆ? ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ನಿಲಯ ಮೇಲ್ವಿಚಾರಕರ ಬಡ್ತಿ ವಿಚಾರದ ಬಗ್ಗೆ ಮನವಿ ಸಲ್ಲಿಸಿದ ಸಂದರ್ಭದಲ್ಲೆಲ್ಲ, ಅಧಿಸೂಚನೆಯಲ್ಲಿದ್ದ ನಿರ್ಬಂಧವನ್ನು ಉಲ್ಲೇಖಿಸುತ್ತಾ ಬಂದಿದ್ದ ಇಲಾಖೆಯು ದಿಢೀರ್‌ ನಿಲುವು ಬದಲಿಸಿದ್ದು ಯಾಕೆ? ಯಾರ ಸೂಚನೆಯ ಮೇರೆಗೆ ಈ ಬದಲಾವಣೆಯನ್ನು ಮಾಡಲಾಗಿದೆ? 312 ಮಂದಿಗೆ ಬಡ್ತಿ ನೀಡಿದ್ದರೂ, ಹುದ್ದೆಗಳ ಮಂಜೂರಾತಿಯೇ ಇಲ್ಲದಿರುವುದರಿಂದ ಅವರು ಹಾಲಿ ಕಾರ್ಯನಿರ್ವಹಿಸುತ್ತಿದ್ದ ಸ್ಥಳಗಳಲ್ಲೇ ಮುಂದುವರಿಸಿ ಆದೇಶ ನೀಡಲಾಗಿದೆ. ಪ್ರಭಾವಿ ವ್ಯಕ್ತಿಯೊಬ್ಬರ ಕೈವಾಡವಿಲ್ಲದೆ ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.

₹11,495 ಕೋಟಿ ವಿಶೇಷ ಅನುದಾನ ಬಿಡುಗಡೆಗೆ ಎಎಪಿ ಒತ್ತಾಯ

15ನೇ ಹಣಕಾಸು ಆಯೋಗವು 2020-21ನೆ ಸಾಲಿನ ವರದಿಯಲ್ಲಿ ಶಿಫಾರಸ್ಸು ಮಾಡಿರುವಂತೆ ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನವನ್ನು ಹಾಗೂ ಬೆಂಗಳೂರು ಅಭಿವೃದ್ಧಿಗೆ 6000 ಕೋಟಿ ಸೇರಿಸಿದಂತೆ ಒಟ್ಟು 11495 ಕೋಟಿ ರೂ. ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

” 2011-12ರಲ್ಲಿ ಎಲ್ಲ ರಾಜ್ಯಗಳ ಜಿಎಸ್‍ಡಿಪಿ ಸರಾಸರಿ ಶೇ.9ಕ್ಕಿಂತ ಕಡಿಮೆ ಇದ್ದರೆ, ನಮ್ಮ ರಾಜ್ಯದ ಜಿಎಸ್‍ಡಿಪಿಯನ್ನು ಶೇ.30ರಷ್ಟು ಹೆಚ್ಚಿಸಲಾಗಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಮೇಲಿನ ಮಲತಾಯಿ ಧೋರಣೆಯನ್ನು ತಕ್ಷಣ ಕೈಬಿಡಬೇಕು ” ಎಂದರು.

ಭ್ರಷ್ಟಾಚಾರದ ವಿಚಾರ ಬಂದಾಗೆಲ್ಲ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಮುಂತಾದವರು ಬಿಜೆಪಿ ಕರ್ಮಕಾಂಡಗಳತ್ತಲೇ ಕೈತೋರಿಸುತ್ತಿದ್ದರು. ಆದರೆ ತಮ್ಮದೇ ಸರ್ಕಾರದ ಇಲಾಖೆಗಳಲ್ಲಿ ಅಕ್ರಮಗಳ ಬಗ್ಗೆ ಏನೂ ಗೊತ್ತಿಲ್ಲದಂತೆ ಕುಳಿತಿದ್ದಾರೆ. ಬಾಯಿ ಬಿಟ್ಟರೆ ತಾವು ಸತ್ಯ ಹರಿಶ್ಚಂದ್ರನ ತುಂಡು ಎಂಬಂತೆ ಆಡುತ್ತಾರೆ. ಭ್ರಷ್ಟಾಚಾರದ ವಾಸನೆ ಕಂಡರೆ ಆಗದಂತೆ ವರ್ತಿಸುತ್ತಾರೆ. ಆದರೆ ಅದೆಲ್ಲವೂ ಬೂಟಾಟಿಕೆ ಎಂಬುದು ಬಹಿರಂಗವಾಗುತ್ತಿದೆ. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಕಮಿಷನ್ ಕೇಳುತ್ತಿದ್ದಾರೆ. ಅಧಿಕೃತವಾಗಿ ರದ್ದುಗೊಂಡ ನೂರಾರು ಹುದ್ದೆಗಳಿಗೆ ಬಡ್ತಿ ನೀಡಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಆದರೆ ಭ್ರಷ್ಟಾಚಾರ ಎಂದಿನಂತೆ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಚಂದ್ರು ಬೇಸರ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಎಎಪಿ ಪಕ್ಷವನ್ನು ಸಂಘಟಿಸಲಾಗುವುದು. ಜಿಲ್ಲೆಗಳಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸ್ಥಳೀಯ ಚುನಾವಣೆಗಳು ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದರು.

Leave a Reply

Your email address will not be published. Required fields are marked *

Back to top button